ವಿಜಯಸಾಕ್ಷಿ ಸುದ್ದಿ, ಮುಳಗುಂದ: ಬಾಲಲೀಲಾ ಮಾಹಾಂತ ಶಿವಯೋಗಿಗಳು ವೈರಾಗ್ಯನಿಧಿಯಾಗಿದ್ದರು ಎಂದು ಹುಬ್ಬಳ್ಳಿ ಮೂರುಸಾವಿರಮಠದ ಜಗದ್ಗುರು ಡಾ. ಗುರುಸಿದ್ದ ರಾಜಯೋಗೀಂದ್ರ ಮಾಹಾಸ್ವಾಮಿಗಳು ಹೇಳಿದರು.
ಅವರು ಪಟ್ಟಣದ ಬಾಲಲೀಲಾ ಮಾಹಾಂತ ಶಿವಯೋಗಿಗಳ 167ನೇ ಜಾತ್ರಾ ಮಹೋತ್ಸವದ ಉದ್ಘಾಟನಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿ, ಮೈಸೂರು ಮುಮ್ಮಡಿ ಕೃಷ್ಣರಾಜ ಒಡೆಯರ ರೋಗಭಾದೆಯನ್ನು ದೂರ ಮಾಡಿದಾಗ ಶಿವಯೋಗಿಗಳಿಗೆ ಮುತ್ತು-ರತ್ನಗಳನ್ನು ನೀಡಿದಾಗ ಅದನ್ನು ಸ್ವೀಕರಿಸದೇ ಕೇವಲ ಕುಂಬಳಕಾಯಿಯನ್ನು ಮಾತ್ರ ಪಡೆದ ಮಹಾ ತಪಸ್ವಿ, ವೈರಾಗ್ಯ ಮೂರ್ತಿ, ವೈರಾಗ್ಯನಿಧಿಯಾಗಿದ್ದಾರೆ. ಇಂತಹ ಪುಣ್ಯಾತ್ಮರ ಪುಣ್ಯ ಭೂಮಿಯಲ್ಲಿ ಜನಿಸಿದ ನಾವೆಲ್ಲರೂ ಧನ್ಯರು ಎಂದರು.
ಮಾಜಿ ಶಾಸಕ ಡಿ.ಆರ್. ಪಾಟೀಲ ಮಾತನಾಡಿ, ಇಂದು ಶ್ರೇಷ್ಠ ರಾಜಕಾರಣಿಯಾಗಬೇಕು ಎಂದರೆ, 12ನೇ ಶತಮಾನದ ಸಂತರು ಮಾಹಾಂತರು, ಶ್ರೀ ಬಾಲಲೀಲಾ ಮಾಹಾಂತ ಶಿವಯೋಗಿಗಳ ದಾರಿಯಲ್ಲಿ ಸಾಗಿದಾಗ ಮಾತ್ರ ಸಾಧ್ಯವಾಗುತ್ತದೆ ಎಂದರು.
ಶ್ವೇತಾ ದೊಟಿಕಲ್ ಹಾಗೂ ವಿಜಯಲಕ್ಷ್ಮೀ ಹಿರೇಮಠ ವಚನ ಸಂಗೀತ ಹಾಡಿದರೆ, ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಕಾರ್ಯಕ್ರಮವನ್ನು ರಮಜಾನ್ ದರ್ಗಾ ಉದ್ಘಾಟಿಸಿದರು. ಸಮ್ಮುಖವನ್ನು ಶಿವಮೊಗ್ಗ ಜಿಲ್ಲೆಯ ಜಡೆ ಸಂಸ್ಥಾನಮಠದ ಡಾ. ಮಾಹಾಂತ ಮಾಹಾಸ್ವಾಮಿಗಳು ವಹಿಸಿದ್ದರು. ಶಿವಮೊಗ್ಗ ಅಲ್ಲಮಪ್ರಭು ಹೊಳೆಮಠ ನಾಗಭೂಷಣ ಮಾಹಾಸ್ವಾಮಿಗಳು, ಗುಡ್ಡದನ್ವೇರಿಯ ಶಿವಯೋಗೀಶ್ವರ ಮಾಹಾಸ್ವಾಮೀಜಿ, ನೀಲಗುಂದ ಗುದ್ನೇಶ್ವರಮಠದ ಪ್ರಭುಲಿಂಗ ದೇವರು, ಗುರಣ್ಣಾ ಬಳಗಾನೂರ, ಪ್ರೊ. ಡಿ.ಎಂ. ಹಿರೇಮಠ, ಜಾತ್ರಾ ಸಮಿತಿ ಅಧ್ಯಕ್ಷ ಗಂಗಪ್ಪ ಸುಂಕಾಪೂರ ಇದ್ದರು.



