2026ರ ಟಿ20 ವಿಶ್ವಕಪ್‌ಗೆ ಮುನ್ನ ನ್ಯೂಜಿಲೆಂಡ್ ವಿರುದ್ಧ ತನ್ನ ಕೊನೆಯ ಟಿ20 ಸರಣಿಯನ್ನು ಆಡಿದ ಟೀಂ ಇಂಡಿಯಾ, ಐದು ಪಂದ್ಯಗಳ ಸರಣಿಯನ್ನು 4–1 ಅಂತರದಿಂದ ಭರ್ಜರಿಯಾಗಿ ಗೆದ್ದುಕೊಂಡಿದೆ. ಮೊದಲ ಮೂರು ಪಂದ್ಯಗಳನ್ನು ಸತತವಾಗಿ ಗೆದ್ದು ಸರಣಿಯನ್ನು ಈಗಾಗಲೇ ತನ್ನದಾಗಿಸಿಕೊಂಡಿದ್ದ ಭಾರತ, ಐದನೇ ಪಂದ್ಯದಲ್ಲೂ ಏಕಪಕ್ಷೀಯ ಗೆಲುವು ದಾಖಲಿಸುವ ಮೂಲಕ ಆತ್ಮವಿಶ್ವಾಸದೊಂದಿಗೆ ವಿಶ್ವಕಪ್‌ಗೆ ಕಾಲಿಟ್ಟಿದೆ.
ತಿರುವನಂತಪುರದ ಗ್ರೀನ್‌ಫೀಲ್ಡ್ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಐದನೇ ಟಿ20 ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿದ ಭಾರತ, 20 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 271 ರನ್‌ಗಳ ಬೃಹತ್ ಮೊತ್ತ ಪೇರಿಸಿತು. ಆರಂಭಿಕರಾಗಿ ಸಂಜು ಸ್ಯಾಮ್ಸನ್ ಮತ್ತು ಅಭಿಷೇಕ್ ಶರ್ಮಾ ಕ್ರೀಸ್‌ಗೆ ಬಂದರೂ, ಇಬ್ಬರೂ 42 ರನ್‌ಗಳೊಳಗೆ ಔಟಾದರು.
ಅನಂತರ ಕ್ರೀಸ್‌ಗೆ ಬಂದ ಇಶಾನ್ ಕಿಶನ್ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿ ಕೇವಲ 43 ಎಸೆತಗಳಲ್ಲಿ 6 ಬೌಂಡರಿ ಮತ್ತು 10 ಸಿಕ್ಸರ್‌ಗಳೊಂದಿಗೆ 103 ರನ್‌ಗಳ ಸಿಡಿಲಬ್ಬರದ ಶತಕ ಸಿಡಿಸಿದರು. ನಾಯಕ ಸೂರ್ಯಕುಮಾರ್ ಯಾದವ್ 30 ಎಸೆತಗಳಲ್ಲಿ 63 ರನ್‌ಗಳ ಸ್ಪೋಟಕ ಇನ್ನಿಂಗ್ಸ್ ಆಡಿದರೆ, ಹಾರ್ದಿಕ್ ಪಾಂಡ್ಯ 17 ಎಸೆತಗಳಲ್ಲಿ 42 ರನ್‌ಗಳ ನಿರ್ಣಾಯಕ ಕೊಡುಗೆ ನೀಡಿದರು. ನ್ಯೂಜಿಲೆಂಡ್ ಪರ ಲಾಕಿ ಫರ್ಗುಸನ್ ಮತ್ತು ಕೈಲ್ ಜೇಮಿಸನ್ ತಲಾ ಎರಡು ವಿಕೆಟ್ ಪಡೆದರೂ, ಭಾರತೀಯ ಬ್ಯಾಟ್ಸ್‌ಮನ್‌ಗಳ ರನ್‌ವೇಗಕ್ಕೆ ಕಡಿವಾಣ ಹಾಕಲು ಸಾಧ್ಯವಾಗಲಿಲ್ಲ.
271 ರನ್‌ಗಳ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್ ತಂಡ ಉತ್ತಮ ಆರಂಭ ಪಡೆದಿತು. ಆರಂಭಿಕ ಫಿನ್ ಅಲೆನ್ 38 ಎಸೆತಗಳಲ್ಲಿ 80 ರನ್ ಗಳಿಸಿ ತಂಡಕ್ಕೆ ಚುರುಕು ಆರಂಭ ನೀಡಿದರು. ರಚಿನ್ ರವೀಂದ್ರ 17 ಎಸೆತಗಳಲ್ಲಿ 30 ರನ್‌ಗಳ ಕಾಣಿಕೆ ನೀಡಿದರು. ಇವರಿಬ್ಬರು ಎರಡನೇ ವಿಕೆಟ್‌ಗೆ 100 ರನ್‌ಗಳ ಜೊತೆಯಾಟ ನಿರ್ಮಿಸಿದರು.
ಆದರೆ ಆ ಬಳಿಕ ಭಾರತೀಯ ಬೌಲರ್‌ಗಳು ಪಂದ್ಯದ ಹಣೆಬರಹ ಬದಲಿಸಿದರು. ಅರ್ಷದೀಪ್ ಸಿಂಗ್ ಐದು ವಿಕೆಟ್‌ಗಳನ್ನು ಕಬಳಿಸಿ ಕಿವೀಸ್ ಬ್ಯಾಟಿಂಗ್ ಲೈನ್‌ಅಪ್‌ನ್ನು ಕುಸಿತಕ್ಕೆ ತಳ್ಳಿದರು. ಅಕ್ಷರ್ ಪಟೇಲ್ ಮೂರು ಹಾಗೂ ವರುಣ್ ಚಕ್ರವರ್ತಿ ಒಂದು ವಿಕೆಟ್ ಪಡೆದು ಬೆಂಬಲ ನೀಡಿದರು. ಪರಿಣಾಮವಾಗಿ ನ್ಯೂಜಿಲೆಂಡ್ 19.4 ಓವರ್‌ಗಳಲ್ಲಿ 225 ರನ್‌ಗಳಿಗೆ ಆಲೌಟ್ ಆಯಿತು. ಭಾರತ 46 ರನ್‌ಗಳ ಅಂತರದಿಂದ ಭರ್ಜರಿ ಜಯ ಸಾಧಿಸಿತು.



