ನವದೆಹಲಿ: ನಾಮಮಾತ್ರ ಶುಲ್ಕ ಪಾವತಿಸುವ ಪರಿಷ್ಕೃತ ಆದಾಯ ತೆರಿಗೆ (ಐ-ಟಿ) ರಿಟರ್ನ್ಸ್ ಸಲ್ಲಿಕೆಗೆ ನೀಡಿದ್ದ ಗಡುವನ್ನು ಕೇಂದ್ರ ಸರ್ಕಾರ ವಿಸ್ತರಿಸಿದೆ. ಈವರೆಗೆ ಡಿಸೆಂಬರ್ 31 ರವರೆಗೆ ಮಾತ್ರ ಅವಕಾಶ ಇದ್ದರೆ, ಇದೀಗ ಮಾರ್ಚ್ 31 ರವರೆಗೆ ಪರಿಷ್ಕೃತ ರಿಟರ್ನ್ಸ್ ಸಲ್ಲಿಸಲು ಅವಕಾಶ ನೀಡಲಾಗಿದೆ.
ಕೇಂದ್ರ ಬಜೆಟ್ ಭಾಷಣದ ವೇಳೆ ಈ ಘೋಷಣೆ ಮಾಡಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಪರಿಷ್ಕೃತ ಐ-ಟಿ ರಿಟರ್ನ್ಸ್ ಸಲ್ಲಿಕೆಗೆ ತೆರಿಗೆದಾರರಿಗೆ ಹೆಚ್ಚುವರಿ ಸಮಯ ನೀಡುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಇದೇ ವೇಳೆ, ಉದಾರೀಕೃತ ರವಾನೆ ಯೋಜನೆ (LRS) ಅಡಿಯಲ್ಲಿ ಶಿಕ್ಷಣ ಹಾಗೂ ವೈದ್ಯಕೀಯ ಶಿಕ್ಷಣಕ್ಕಾಗಿ ವಿದೇಶಕ್ಕೆ ಹಣ ರವಾನಿಸುವುದರ ಮೇಲೆ ವಿಧಿಸಲಾಗುತ್ತಿದ್ದ ಟಿಸಿಎಸ್ ದರವನ್ನು ಶೇಕಡಾ 5ರಿಂದ ಶೇಕಡಾ 2ಕ್ಕೆ ಇಳಿಸಲು ಸರ್ಕಾರ ಪ್ರಸ್ತಾಪಿಸಿದೆ.
ಅಲ್ಲದೆ, ವಿದೇಶಿ ಪ್ರವಾಸ ಪ್ಯಾಕೇಜ್ಗಳ ಮಾರಾಟದ ಮೇಲಿನ ಟಿಸಿಎಸ್ ದರವನ್ನು ಕೂಡ ಶೇಕಡಾ 5ರಿಂದ ಶೇಕಡಾ 2ಕ್ಕೆ ಇಳಿಸಲಾಗುವುದು ಎಂದು ಘೋಷಿಸಲಾಗಿದೆ. ಈ ದರ ಈ ಹಿಂದೆ ಶೇಕಡಾ 20ರಷ್ಟಿತ್ತು ಎಂಬುದು ಗಮನಾರ್ಹ.
ಸಣ್ಣ ತೆರಿಗೆದಾರರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ, 2027ರ ಹಣಕಾಸು ವರ್ಷದ ಬಜೆಟ್ನಲ್ಲಿ ನಿಯಮ ಆಧಾರಿತ ಸ್ವಯಂಚಾಲಿತ ತೆರಿಗೆ ಪ್ರಕ್ರಿಯೆಯನ್ನು ಜಾರಿಗೆ ತರಲು ಸರ್ಕಾರ ಮುಂದಾಗಿದೆ.
ಇನ್ನು ಮಹತ್ವದ ನಿರ್ಧಾರವಾಗಿ, ಮೋಟಾರು ಅಪಘಾತಗಳಲ್ಲಿ ಸಂತ್ರಸ್ತರು ಸಲ್ಲಿಸುವ ಪರಿಹಾರ ಕ್ಲೇಮುಗಳಿಗೆ ಆದಾಯ ತೆರಿಗೆ ವಿನಾಯಿತಿ ನೀಡಲಾಗುವುದು ಎಂದು ಸಚಿವೆ ಘೋಷಿಸಿದರು. ಅಂದರೆ ಅಪಘಾತ ಸಂತ್ರಸ್ತರಿಗೆ ದೊರಕುವ ಪರಿಹಾರ ಮೊತ್ತಕ್ಕೆ ಯಾವುದೇ ಆದಾಯ ತೆರಿಗೆ ವಿಧಿಸಲಾಗುವುದಿಲ್ಲ.



