ನವದೆಹಲಿ: 2026ರ ಐಸಿಸಿ ಪುರುಷರ ಟಿ20 ವಿಶ್ವಕಪ್‌ನ ಗುಂಪು ಹಂತದಲ್ಲಿ ಭಾರತ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವಂತೆ ಪಾಕಿಸ್ತಾನ ಸರ್ಕಾರ ತನ್ನ ಕ್ರಿಕೆಟ್ ತಂಡಕ್ಕೆ ಆದೇಶಿಸಿರುವ ನಿರ್ಧಾರಕ್ಕೆ ಸಂಬಂಧಿಸಿ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ತೀವ್ರ ಕಳವಳ ವ್ಯಕ್ತಪಡಿಸಿದೆ. ಈ ಕ್ರಮವು ಅಂತಾರಾಷ್ಟ್ರೀಯ ಕ್ರೀಡಾ ಮಾನದಂಡಗಳಿಗೆ ವಿರುದ್ಧವಾಗಿದೆ ಎಂದು ಐಸಿಸಿ ಸ್ಪಷ್ಟಪಡಿಸಿದೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಐಸಿಸಿ, ಪಾಕಿಸ್ತಾನ ಸರ್ಕಾರದ ನಿರ್ಧಾರ ತನ್ನ ಗಮನಕ್ಕೆ ಬಂದಿದ್ದರೂ, ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB)ಯಿಂದ ಅಧಿಕೃತ ಮಾಹಿತಿ ದೊರೆಯುವವರೆಗೆ ಕಾಯಲಾಗುತ್ತಿದೆ ಎಂದು ತಿಳಿಸಿದೆ. ಪಂದ್ಯಾವಳಿಯಲ್ಲಿ ಆಯ್ದ ಪಂದ್ಯಗಳಲ್ಲಿ ಮಾತ್ರ ಭಾಗವಹಿಸುವ ಧೋರಣೆ ಸ್ವೀಕಾರಾರ್ಹವಲ್ಲ ಎಂದು ಐಸಿಸಿ ಅಸಮಾಧಾನ ವ್ಯಕ್ತಪಡಿಸಿದೆ.
“ರಾಷ್ಟ್ರೀಯ ನೀತಿ ವಿಷಯಗಳಲ್ಲಿ ಸರ್ಕಾರಗಳ ಪಾತ್ರವನ್ನು ಐಸಿಸಿ ಗೌರವಿಸುತ್ತದೆ. ಆದರೆ ಈ ನಿರ್ಧಾರವು ಸೂಕ್ತವಲ್ಲ. ಇದು ಜಾಗತಿಕ ಕ್ರಿಕೆಟ್ ಅಭಿಮಾನಿಗಳಷ್ಟೇ ಅಲ್ಲದೆ, ಪಾಕಿಸ್ತಾನದಲ್ಲಿರುವ ಲಕ್ಷಾಂತರ ಕ್ರಿಕೆಟ್ ಅಭಿಮಾನಿಗಳ ಹಿತಾಸಕ್ತಿಗೂ ವಿರುದ್ಧವಾಗಿದೆ” ಎಂದು ಐಸಿಸಿ ಹೇಳಿಕೆಯಲ್ಲಿ ಉಲ್ಲೇಖಿಸಿದೆ.
ಪಾಕಿಸ್ತಾನ ತೆಗೆದುಕೊಂಡಿರುವ ಈ ನಿರ್ಧಾರವು ದೀರ್ಘಕಾಲೀನ ಪರಿಣಾಮಗಳನ್ನುಂಟು ಮಾಡಬಹುದಾದ್ದರಿಂದ, ಮತ್ತೊಮ್ಮೆ ಪರಿಶೀಲಿಸುವಂತೆ ಐಸಿಸಿ ಪಿಸಿಬಿಯನ್ನು ಮನವಿ ಮಾಡಿದೆ.
ಭಾರತ–ಪಾಕಿಸ್ತಾನ ಪಂದ್ಯಗಳು ವಿಶ್ವ ಕ್ರಿಕೆಟ್‌ನಲ್ಲಿ ವಿಶೇಷ ಆಕರ್ಷಣೆಯನ್ನು ಹೊಂದಿವೆ. ಎರಡೂ ರಾಷ್ಟ್ರಗಳ ನಡುವಿನ ರಾಜತಾಂತ್ರಿಕ ಬಿಕ್ಕಟ್ಟುಗಳ ನಡುವೆಯೂ, 2012ರಿಂದ ಐಸಿಸಿ ಪ್ರಮುಖ ಪಂದ್ಯಾವಳಿಗಳಲ್ಲಿ ಎರಡೂ ತಂಡಗಳನ್ನು ಒಂದೇ ಗುಂಪಿನಲ್ಲಿ ಸೇರಿಸಿ ಪಂದ್ಯಗಳನ್ನು ಆಯೋಜಿಸುತ್ತಾ ಬಂದಿದೆ. ಈ ಬಾರಿ ಪಾಕಿಸ್ತಾನ ಭಾರತ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸಿದರೆ, 2010ರ ನಂತರ ಉಭಯ ತಂಡಗಳು ಮುಖಾಮುಖಿಯಾಗದ ಮೊದಲ ಐಸಿಸಿ ಪಂದ್ಯಾವಳಿ ಇದಾಗಲಿದೆ.
ಪಾಕಿಸ್ತಾನ ತನ್ನ ನಿರ್ಧಾರವನ್ನು ಹಿಂತೆಗೆದುಕೊಳ್ಳದಿದ್ದರೆ, ಐಸಿಸಿ ಪಿಸಿಬಿ ವಿರುದ್ಧ ಹಲವು ಕಠಿಣ ಕ್ರಮಗಳನ್ನು ಕೈಗೊಳ್ಳುವ ಸಾಧ್ಯತೆ ಇದೆ. ಪಾಕಿಸ್ತಾನ ಸೂಪರ್ ಲೀಗ್ (PSL)ನಲ್ಲಿ ಪಾಲ್ಗೊಳ್ಳಲು ವಿದೇಶಿ ಆಟಗಾರರು ಅಗತ್ಯವಿರುವ ನಿರ್ಬಂಧರಹಿತ ಪ್ರಮಾಣಪತ್ರ (NOC) ಪಡೆಯುವಲ್ಲಿ ತೊಂದರೆ ಉಂಟಾಗುವ ಸಾಧ್ಯತೆ ಇದೆ. ಇದರಿಂದ ಪಾಕಿಸ್ತಾನಕ್ಕೆ ಗಂಭೀರ ಆರ್ಥಿಕ ನಷ್ಟ ಸಂಭವಿಸಬಹುದು. ಅಲ್ಲದೆ, ಭವಿಷ್ಯದಲ್ಲಿ ಐಸಿಸಿ ಪಂದ್ಯಾವಳಿಗಳನ್ನು ಆಯೋಜಿಸುವ ಹಕ್ಕನ್ನೂ ಪಾಕಿಸ್ತಾನ ಕಳೆದುಕೊಳ್ಳುವ ಅಪಾಯವಿದೆ ಎಂದು ವರದಿಗಳು ತಿಳಿಸಿವೆ.
ಇದರ ನಡುವೆ, ಭಾನುವಾರ ಪಾಕಿಸ್ತಾನ ಸರ್ಕಾರ ತನ್ನ ಎಕ್ಸ್ (ಹಿಂದಿನ ಟ್ವಿಟರ್) ಖಾತೆಯಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿದ್ದು, ಟಿ20 ವಿಶ್ವಕಪ್ 2026ರಲ್ಲಿ ಪಾಲ್ಗೊಳ್ಳಲು ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಅನುಮತಿ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದೆ. ಆದರೆ, ಫೆಬ್ರವರಿ 15, 2026ರಂದು ಭಾರತ ವಿರುದ್ಧ ನಡೆಯಲಿರುವ ಪಂದ್ಯವನ್ನು ಪಾಕಿಸ್ತಾನ ತಂಡ ಬಹಿಷ್ಕರಿಸಲಿದೆ ಎಂದು ಪ್ರಕಟಿಸಿದೆ.



