ಬೆಂಗಳೂರು: ಕೆ.ಪಿ. ಅಗ್ರಹಾರ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಗೋವಿಂದರಾಜು ಟ್ರಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರ ವಿರುದ್ಧ ದೂರು ದಾಖಲಾಗಿದೆ. ಟ್ರಾಪ್ ಕಾರ್ಯಾಚರಣೆ ವೇಳೆ ಲೋಕಾಯುಕ್ತ ಸಿಬ್ಬಂದಿ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಟ್ರಾಪ್ ವೇಳೆ ಇನ್ಸ್‌ಪೆಕ್ಟರ್ ಗೋವಿಂದರಾಜು ಅವರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ, ಹಿರಿಯ ವಕೀಲ ಪ್ರಶಾಂತ್ ಮೆತಲ್ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದಾರೆ. ಲಂಚಮುಕ್ತ ಸಮಾಜ ನಿರ್ಮಾಣಕ್ಕೆ ಲೋಕಾಯುಕ್ತ ಮಾಡುತ್ತಿರುವ ಕೆಲಸ ಶ್ಲಾಘನೀಯವಾದರೂ, ಈ ಪ್ರಕರಣದಲ್ಲಿ ಸಿಬ್ಬಂದಿ ಹಾಗೂ ಅಧಿಕಾರಿಗಳು ಕಾನೂನು ಪಾಲನೆ ಮಾಡಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ದೂರಿನಲ್ಲಿ, ಟ್ರಾಪ್ ಕಾರ್ಯಾಚರಣೆ ವೇಳೆ ಹೋಮ್ ಗಾರ್ಡ್ ಒಬ್ಬರು ಸೆಲ್ಫಿ ವಿಡಿಯೋ ಚಿತ್ರೀಕರಿಸಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ರೀತಿ ವಿಡಿಯೋ ಚಿತ್ರೀಕರಣ ಹಾಗೂ ವೈರಲ್ ಮಾಡಲು ಅವರಿಗೆ ಯಾರು ಅನುಮತಿ ನೀಡಿದರು ಎಂಬ ಪ್ರಶ್ನೆಯನ್ನೂ ದೂರಿನಲ್ಲಿ ಎತ್ತಲಾಗಿದೆ.
ವೈರಲ್ ಆದ ವಿಡಿಯೋದಿಂದ ಇನ್ಸ್‌ಪೆಕ್ಟರ್ ಗೋವಿಂದರಾಜು ಅವರ ಕುಟುಂಬಕ್ಕೆ ತೀವ್ರ ಮಾನಸಿಕ ನೋವುಂಟಾಗಿದೆ. ಈ ಕಾರಣದಿಂದಾಗಿ ಅವರ ಮಕ್ಕಳು ಶಾಲೆಗೆ ಹೋಗಲು ಸಹ ಸಾಧ್ಯವಾಗುತ್ತಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ. ಇದರಿಂದಾಗಿ ಗೋವಿಂದರಾಜು ಅವರು ಮಾನನಷ್ಟ (ಡಿಫಮೇಶನ್) ಮೊಕದ್ದಮೆ ಹೂಡಲು ಚಿಂತಿಸುತ್ತಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಲೋಕಾಯುಕ್ತ ಪೊಲೀಸರು ಸ್ವತಂತ್ರ ಹಾಗೂ ಸಮಗ್ರ ತನಿಖೆ ನಡೆಸಬೇಕೆಂದು ದೂರುದಲ್ಲಿ ಆಗ್ರಹಿಸಲಾಗಿದೆ.



