ಚಿಕ್ಕಬಳ್ಳಾಪುರ: ಹೆಲಿಕಾಪ್ಟರ್ ಮೂಲಕ ಭೂಗರ್ಭದಲ್ಲಿನ ಬಂಗಾರ, ಖನಿಜ ನಿಕ್ಷೇಪಗಳ ಶೋಧ ಕಾರ್ಯ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಡೆಯುತ್ತಿದೆ.
ಜಿಲ್ಲೆಯ ಗುಡಿಬಂಡೆ ತಾಲೂಕಿನ ಬೀಚಗಾನಹಳ್ಳಿ ಕ್ರಾಸ್ ಬಳಿ ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣಾ ಇಲಾಖೆ (ಜಿಎಸ್‌ಐ) ವತಿಯಿಂದ ಹೆಲಿಕಾಪ್ಟರ್ ಮೂಲಕ ಭೂಗರ್ಭದಲ್ಲಿರುವ ಚಿನ್ನ ಸೇರಿದಂತೆ ವಿವಿಧ ಖನಿಜ ನಿಕ್ಷೇಪಗಳ ಶೋಧ ಕಾರ್ಯ ನಡೆಯುತ್ತಿದೆ.
ಅತ್ಯಾಧುನಿಕ ವೈಜ್ಞಾನಿಕ ಸಾಧನಗಳು, ಜಿಐಎಸ್ ಹಾಗೂ ರಿಮೋಟ್ ಸೆನ್ಸಿಂಗ್ ತಂತ್ರಜ್ಞಾನ ಬಳಸಿ ಈ ಏರಿಯಲ್ ಸರ್ವೆ ಕೈಗೊಳ್ಳಲಾಗಿದ್ದು, ಕೆಜಿಎಫ್ ಗೋಲ್ಡ್ ಮೈನಿಂಗ್ ಬೆಟ್ಟ ಸಾಲಿಗೆ ಹೊಂದಿಕೊಂಡಿರುವ ಈ ಜಿಲ್ಲೆಗೆ ಹೆಚ್ಚಿನ ಮಹತ್ವ ನೀಡಲಾಗಿದೆ.
ಈ ಹಿಂದೆ ಬಾಗೇಪಲ್ಲಿ ಮತ್ತು ಗುಡಿಬಂಡೆ ಪ್ರದೇಶಗಳಲ್ಲಿ ಬಂಗಾರದ ಕಣಗಳು ಪತ್ತೆಯಾಗಿದ್ದ ಹಿನ್ನೆಲೆ ಈ ಅಧ್ಯಯನಕ್ಕೆ ಬಲ ನೀಡಿದೆ. ಜಿಲ್ಲಾಧಿಕಾರಿ ಜಿ.ಪ್ರಭು ಅವರಂತೆ, 2019–20ರಲ್ಲಿ ನಡೆದ ಪ್ರಾಥಮಿಕ ಸರ್ವೆಯ ಆಧಾರದಲ್ಲಿ ಈಗ ಆಳವಾದ ಅಧ್ಯಯನ ನಡೆಯುತ್ತಿದ್ದು, ಮೇ 31ರವರೆಗೆ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಸರ್ವೆ ಮುಂದುವರಿಯಲಿದೆ.
ಜಿಲ್ಲಾಧಿಕಾರಿ ಜಿ.ಪ್ರಭು ಹೇಳಿದ್ದೇನು?
ಈ ಬಗ್ಗೆ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಜಿ.ಪ್ರಭು ಪ್ರತಿಕ್ರಿಯಿಸಿದ್ದು, ಜಿಲ್ಲೆಯಲ್ಲಿ 2019-2020ರಲ್ಲಿ ಸರ್ವೆ ಕಾರ್ಯ ನಡೆದಿತ್ತು. ಆ ಸರ್ವೆ ಆಧರಿಸಿ ಈಗ ಆಳ ಅಧ್ಯಯನ ನಡೆದಿದೆ. ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣಾ ಇಲಾಖೆಯ ಭೌಗೋಳಿಕ ಮಾಹಿತಿ ವ್ಯವಸ್ಥೆ ವಿಭಾಗ ಹಾಗೂ ರಿಮೋಟ್ ಸೆನ್ಸಿಂಗ್ ವಿಭಾಗದಿಂದ ಸರ್ವೆ ನಡೆಯುತ್ತಿದೆ ಎಂದರು.
ಮೂಲ ಲೋಹಗಳು ಸೇರಿದಂತೆ ಚಿನ್ನ, ಬೆಳ್ಳಿ, ತಾಮ್ರ, ಕಬ್ಬಿಣ ಸೇರಿದಂತೆ ಲೋಹಗಳ ಇರುವಿಕೆಯ ಬಗ್ಗೆ ಸರ್ವೆ ಮಾಡಲಾಗುತ್ತಿದ್ದು, ಮೇ 31ರವರೆಗೂ ಸರ್ವೆ ನಡೆಯುತ್ತೆ. ಚಿಕ್ಕಬಳ್ಳಾಪುರ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಸರ್ವೆ ನಡೆಯಲಿದ್ದು, ಹೆಲಿಕಾಪ್ಟರ್ ತೀರ ಕೆಳ ಹಂತದಲ್ಲಿ ಸಂಚಾರ ಮಾಡಲಿದೆ. ಹೀಗಾಗಿ ಸಾರ್ವಜನಿಕರು ಭಯ ಬೀಳದಂತೆ ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.



