ಬೆಂಗಳೂರು: ಬೆಂಗಳೂರು ಮೆಟ್ರೋ ಟಿಕೆಟ್ ದರ ಏರಿಕೆ ವಿಚಾರ ಮತ್ತೆ ಭಾರೀ ವಿವಾದಕ್ಕೆ ಕಾರಣವಾಗಿದೆ. ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಬೋರ್ಡ್ ಸಭೆಯಲ್ಲಿ ಶೇ 5ರಷ್ಟು ಟಿಕೆಟ್ ದರ ಹೆಚ್ಚಳಕ್ಕೆ ಒಪ್ಪಿಗೆ ನೀಡಲಾಗಿದೆ. ಆದರೆ ಈ ದರ ಏರಿಕೆ ತಕ್ಷಣ ಜಾರಿಗೆ ಬರುವುದಿಲ್ಲ. ಇದಕ್ಕೆ ರಾಜ್ಯ ಸರ್ಕಾರದ ಅಂತಿಮ ಅನುಮತಿ ಅಗತ್ಯವಿದ್ದು, ಸರ್ಕಾರದ ಒಪ್ಪಿಗೆ ಪಡೆಯಲು ಬಿಎಂಆರ್‌ಸಿಎಲ್ ಅಧಿಕಾರಿಗಳು ಪ್ರಯತ್ನ ನಡೆಸುತ್ತಿದ್ದಾರೆ.
ಕಳೆದ ವರ್ಷ ಫೆಬ್ರವರಿ 9ರಂದು ಮೆಟ್ರೋ ಟಿಕೆಟ್ ದರವನ್ನು ಶೇ 101.5ರಷ್ಟು ಏರಿಕೆ ಮಾಡಲಾಗಿತ್ತು. ಪ್ರಯಾಣಿಕರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕೇವಲ ಮೂರು ದಿನಗಳಲ್ಲೇ ದರವನ್ನು ಶೇ 71.5ಕ್ಕೆ ಇಳಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಆ ವಿವಾದದ ಕಹಿ ನೆನಪು ಮಾಸುವ ಮೊದಲೇ ಮತ್ತೊಮ್ಮೆ ದರ ಏರಿಕೆ ಚರ್ಚೆ ಆರಂಭವಾಗಿರುವುದು ಪ್ರಯಾಣಿಕರ ಅಸಮಾಧಾನಕ್ಕೆ ಕಾರಣವಾಗಿದೆ.
ಈಗ ಬಿಎಂಆರ್‌ಸಿಎಲ್ ಬೋರ್ಡ್ ಸಭೆಯಲ್ಲಿ ಶೇ 5ರಷ್ಟು ದರ ಏರಿಕೆಗೆ ಒಪ್ಪಿಗೆ ದೊರೆತಿದ್ದು, ಸರ್ಕಾರದ ಅಂತಿಮ ನಿರ್ಧಾರಕ್ಕಾಗಿ ಕಾಯಲಾಗುತ್ತಿದೆ. ಪ್ರಯಾಣಿಕರ ತೀವ್ರ ವಿರೋಧದ ನಡುವೆಯೂ ಮೆಟ್ರೋ ನಿಗಮ ದರ ಏರಿಕೆಗೆ ಪಟ್ಟು ಹಿಡಿದಿದೆ ಎನ್ನುವ ಆರೋಪಗಳು ಕೇಳಿಬರುತ್ತಿವೆ.



