ತೆಲುಗಿನ ಉದಯೋನ್ಮುಖ ನಟ ಚಂದ್ರಹಾಸ್ ವಿರುದ್ಧ ಪ್ರಚಾರ ಕಾರ್ಯಕ್ರಮದ ವೇಳೆ ನಡೆದ ಘಟನೆಯೊಂದು ಭಾರೀ ವಿವಾದಕ್ಕೆ ಕಾರಣವಾಗಿದೆ. ಹಿರಿಯ ನಟ ಇಟಿವಿ ಪ್ರಭಾಕರ್ ಅವರ ಪುತ್ರರಾಗಿರುವ ಚಂದ್ರಹಾಸ್, ತಮ್ಮ ಮುಂದಿನ ಸಿನಿಮಾ ‘ಬರಾಬರ್ ಪ್ರೇಮಿಸ್ತ’ ಪ್ರಚಾರ ಕಾರ್ಯಕ್ರಮದಲ್ಲಿ ಅಸಭ್ಯ ವರ್ತನೆ ತೋರಿದ್ದಾರೆ ಎಂಬ ಆರೋಪ ಎದುರಿಸುತ್ತಿದ್ದಾರೆ.
ಕಾರ್ಯಕ್ರಮದ ವೇಳೆ ವೇದಿಕೆ ಏರಿದ ಚಂದ್ರಹಾಸ್, ಅಶ್ಲೀಲ ಅರ್ಥ ಹೊಂದಿರುವ ಹಾಡೊಂದನ್ನು ಹಾಡಿದ್ದಾರೆ. ವೇದಿಕೆಯ ಎದುರು ಸಿನಿಮಾದ ನಾಯಕಿ ಸೇರಿದಂತೆ ಹಲವು ಮಹಿಳೆಯರು, ಹಿರಿಯ ನಟ ಜೆಡಿ ಚಕ್ರವರ್ತಿ ಹಾಗೂ ಮಾಧ್ಯಮ ಪ್ರತಿನಿಧಿಗಳು ಇದ್ದರೂ, ಸಂಯಮ ತೋರದೇ ಹಾಡಿನಲ್ಲಿ ಅಸಭ್ಯ ಪದಗಳ ಬಳಕೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಹಾಡಿನ ಬಳಿಕ, ಅಲ್ಲೇ ಇದ್ದ ಕೆಲ ಪತ್ರಕರ್ತರು ಅದರ ಔಚಿತ್ವದ ಬಗ್ಗೆ ಪ್ರಶ್ನೆ ಮಾಡಿದಾಗ, ಚಂದ್ರಹಾಸ್ ಕೋಪಗೊಂಡು ಒಬ್ಬ ಪತ್ರಕರ್ತನಿಗೆ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಡುತ್ತಿದ್ದಂತೆ, ವಿಷಯ ಗಂಭೀರ ಸ್ವರೂಪ ಪಡೆದುಕೊಂಡಿದ್ದು, ನಟ ಚಂದ್ರಹಾಸ್ ವಿರುದ್ಧ ಪೊಲೀಸರಿಗೆ ದೂರು ದಾಖಲಿಸಲಾಗಿದೆ.
ವಿವಾದ ಹೆಚ್ಚಾಗುತ್ತಿದ್ದಂತೆ, ಚಿತ್ರದ ನಿರ್ದೇಶಕ ಸಂಪತ್ ರುದ್ರಾ ಹಾಗೂ ನಿರ್ಮಾಪಕರು ಮಾಧ್ಯಮಗಳ ಮುಂದೆ ಬಂದು ಕ್ಷಮೆಯಾಚಿಸಿದ್ದು, “ಆ ಹಾಡು ನಮ್ಮ ಸಿನಿಮಾದ ಭಾಗವಲ್ಲ. ಇದು ಹೀರೋ ಅವರ ವೈಯಕ್ತಿಕ ನಡೆ. ಈ ಘಟನೆಯಿಂದ ನಮಗೂ ಆಘಾತವಾಗಿದೆ” ಎಂದು ಸ್ಪಷ್ಟನೆ ನೀಡಿದ್ದಾರೆ.
ಆದರೆ ನಟ ಚಂದ್ರಹಾಸ್ ತಮ್ಮ ಮೇಲೆ ಬಂದ ಆರೋಪಗಳನ್ನು ತಳ್ಳಿಹಾಕಿದ್ದು, “ನಾನು ಯಾರ ಬಳಿಯೂ ಕ್ಷಮೆ ಕೇಳುವುದಿಲ್ಲ. ನನ್ನ ಹಾಡಿನ ಕೆಲವೇ ಭಾಗಗಳನ್ನು ಕಟ್ ಮಾಡಿ ತಪ್ಪಾಗಿ ಪ್ರದರ್ಶಿಸಲಾಗುತ್ತಿದೆ” ಎಂದು ಹೇಳಿದ್ದಾರೆ.
ಈ ಘಟನೆ, ಸಿನಿಮಾದ ನಾಯಕರ ಸಾಮಾಜಿಕ ಜವಾಬ್ದಾರಿ ಮತ್ತು ಸಾರ್ವಜನಿಕ ವೇದಿಕೆಯಲ್ಲಿ ತೋರಬೇಕಾದ ಸಂಯಮದ ಕುರಿತು ಮತ್ತೊಮ್ಮೆ ಚರ್ಚೆಗೆ ಕಾರಣವಾಗಿದೆ.



