ಅಸ್ಸಾಂ: ಮೇಘಾಲಯದ ಸುಟಂಗಾ ಪ್ರದೇಶದಲ್ಲಿರುವ ಅಕ್ರಮ ಕಲ್ಲಿದ್ದಲು ಗಣಿಯಲ್ಲಿ ಗುರುವಾರ ಸಂಭವಿಸಿದ ಭೀಕರ ಸ್ಫೋಟದಲ್ಲಿ ಸಾವನ್ನಪ್ಪಿದವರ ಸಂಖ್ಯೆ 25ಕ್ಕೆ ಏರಿಕೆಯಾಗಿದೆ. ಅಕ್ರಮ ಕಲ್ಲಿದ್ದಲು ಗಣಿಗಾರಿಕೆ ಹಾಗೂ ಗಣಿಯ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು ಎಂಬ ಆರೋಪದ ಮೇಲೆ ಮೇಘಾಲಯ ಪೊಲೀಸರು ಇಬ್ಬರು ವ್ಯಕ್ತಿಗಳನ್ನು ಬಂಧಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಪೂರ್ವ ಜೈನ್ತಿಯಾ ಹಿಲ್ಸ್ ಎಸ್‌ಪಿ ವಿಕಾಸ್ ಕುಮಾರ್, ಈ ದುರ್ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ 25ಕ್ಕೆ ಏರಿದೆ ಎಂದು ತಿಳಿಸಿದ್ದಾರೆ. ಘಟನಾ ಸ್ಥಳದಲ್ಲಿ ಇನ್ನೂ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ ಎಂದಿದ್ದಾರೆ.
ಸ್ಫೋಟ ಸಂಭವಿಸಿದ ದಿನ ಗಣಿಯೊಳಗೆ ಎಷ್ಟು ಕಾರ್ಮಿಕರು ಇದ್ದರು ಎಂಬ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಆದರೆ ಸ್ಥಳೀಯ ನಿವಾಸಿಗಳ ಪ್ರಕಾರ, ಸ್ಫೋಟದ ವೇಳೆ 70ರಿಂದ 100 ಜನ ಕಾರ್ಮಿಕರು ಗಣಿಗಾರಿಕೆಯಲ್ಲಿ ತೊಡಗಿದ್ದರು ಎನ್ನಲಾಗಿದೆ. ರ್ಯಾಟ್ ಹೋಲ್ ಗಣಿಗಾರಿಕೆ ಮೂಲಕ ಅಕ್ರಮವಾಗಿ ಕಲ್ಲಿದ್ದಲು ಹೊರತೆಗೆದಿರುವುದು ಕೂಡ ಪತ್ತೆಯಾಗಿದೆ.
ಕಳಪೆ ಗೋಚರತೆ ಹಾಗೂ ಅಪಾಯಕಾರಿ ಪರಿಸ್ಥಿತಿಗಳ ಕಾರಣದಿಂದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF) ತಂಡಗಳು ಗುರುವಾರ ತಡರಾತ್ರಿ ರಕ್ಷಣಾ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದವು. ಶುಕ್ರವಾರ ರಾತ್ರಿ ನಾಲ್ವರ ಮೃತದೇಹಗಳನ್ನು ವಶಕ್ಕೆ ಪಡೆಯಲಾಗಿದ್ದು, ಶಿಲ್ಲಾಂಗ್ ಆಸ್ಪತ್ರೆಯಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿರುವುದರಿಂದ ಒಟ್ಟು ಸಾವಿನ ಸಂಖ್ಯೆ 25ಕ್ಕೆ ಏರಿದೆ.
ಈ ಪೈಕಿ 17 ಜನರ ಗುರುತು ಪತ್ತೆಯಾಗಿದ್ದು, ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಿದ ನಂತರ ಮೃತದೇಹಗಳನ್ನು ಅವರ ಕುಟುಂಬಗಳಿಗೆ ಹಸ್ತಾಂತರಿಸಲಾಗಿದೆ.



