ಬೆಂಗಳೂರು: ಮೆಟ್ರೋ ಟಿಕೆಟ್ ದರ ಏರಿಕೆ ರಾಜ್ಯ ಸರ್ಕಾರದ ತೀರ್ಮಾನವೇ ಹೊರತು ಕೇಂದ್ರ ಸರ್ಕಾರದ್ದಲ್ಲ ಎಂದು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರವೇ ಪದೇಪದೇ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಫೇರ್ ಫಿಕ್ಸ್ ಕಮಿಟಿ ರಚನೆಗೆ ಒತ್ತಾಯಿಸಿದೆ. ಅದರಂತೆ ಕೇಂದ್ರ ಸರ್ಕಾರ ಸಮಿತಿಯನ್ನು ರಚಿಸಿದೆ. ಈಗ ಆ ಸಮಿತಿಯೇ ದರ ಏರಿಕೆ ಮಾಡಿದ್ದು, ಇದಕ್ಕೂ ಕೇಂದ್ರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.
ಮೆಟ್ರೋ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಒಪ್ಪಂದ ಇದೆ. ರಾಜ್ಯ ಸರ್ಕಾರದ ಒತ್ತಾಯದ ಮೇರೆಗೆ ದರ ಏರಿಕೆ ಆಗಿದೆ. ಆದರೆ ಇದೀಗ ಕೇಂದ್ರದ ಮೇಲೆ ಆರೋಪ ಮಾಡಿ ಸಿಎಂ ಹಾಗೂ ಡಿಸಿಎಂ ನಿತ್ಯ ರಾಜಕೀಯ ಡ್ರಾಮಾ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ರಾಜ್ಯ ಸರ್ಕಾರ ದಿವಾಳಿ ಸ್ಥಿತಿಗೆ ತಲುಪಿದ್ದು, ಅದರ ಹೊರೆ ಜನರ ಮೇಲೆ ಹಾಕುತ್ತಿದೆ. ದರ ಏರಿಕೆಯಿಂದ ಬಡವರು ಮೆಟ್ರೋ ಪ್ರಯಾಣ ಮಾಡಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಸೋಮವಾರದಿಂದ ಜಾರಿಯಾಗಲಿರುವ ಮೆಟ್ರೋ ಟಿಕೆಟ್ ದರ ಏರಿಕೆಯನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಆಗ್ರಹಿಸಿದರು. ಈ ಸಂಬಂಧ ಫೆಬ್ರವರಿ 8ರಂದು ಹೋರಾಟ ನಡೆಸುವುದಾಗಿ ತಿಳಿಸಿದರು.
ಕೇಂದ್ರದ ಸಚಿವರಿಗೆ ಈ ಬಗ್ಗೆ ಮನವಿ ಮಾಡಲಾಗಿದೆ. ರಾಜ್ಯ ಸರ್ಕಾರ ಫೇರ್ ಫಿಕ್ಸ್ ಕಮಿಟಿಗೆ ಸಂಬಂಧಿಸಿದಂತೆ ಪತ್ರ ಬರೆದರೆ ಅದನ್ನು ತಾತ್ಕಾಲಿಕವಾಗಿ ಹೋಲ್ಡ್‌ನಲ್ಲಿ ಇಡಬೇಕು. ರಾಜ್ಯ ಸರ್ಕಾರ ಹೊಸ ಸಮಿತಿ ಬೇಕೆಂದು ಪತ್ರ ಬರೆದರೆ ತಕ್ಷಣವೇ ಹೊಸ ಫೇರ್ ಫಿಕ್ಸ್ ಕಮಿಟಿ ರಚಿಸಬೇಕು ಎಂದು ಕೇಂದ್ರ ಸಚಿವರಿಗೆ ಮನವಿ ಮಾಡಿದ್ದು, ಅದಕ್ಕೆ ಅವರು ಸಮ್ಮತಿಸಿದ್ದಾರೆ ಎಂದರು. ದರ ಏರಿಕೆ ವಿರುದ್ಧ ಕೇಂದ್ರ ಸರ್ಕಾರ ಸುಮೋಟೋ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ. ರಾಜ್ಯ–ಕೇಂದ್ರ ನಡುವೆ ಇರುವ MOU ಕಾರಣದಿಂದ ಏಕಪಕ್ಷೀಯ ನಿರ್ಧಾರ ಸಾಧ್ಯವಿಲ್ಲ. ಆದರೆ ಸಿಎಂ ಹಾಗೂ ಡಿಸಿಎಂ ಮೀಡಿಯಾದಲ್ಲಿ ನಿತ್ಯ ಸುಳ್ಳು ಹೇಳುತ್ತಿದ್ದಾರೆ. ಅವರಿಗೆ ನಾಚಿಕೆ ಇಲ್ಲವೇ ಎಂದು ತೇಜಸ್ವಿ ಸೂರ್ಯ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದ ಜನರು ಸಿಎಂ ಮತ್ತು ಡಿಸಿಎಂ ಮೇಲೆ ಒತ್ತಡ ಹಾಕಬೇಕು. ಹೊಸ ಫೇರ್ ಫಿಕ್ಸ್ ಕಮಿಟಿ ರಚನೆಗಾಗಿ ಕೇಂದ್ರಕ್ಕೆ ಪತ್ರ ಬರೆಯುವಂತೆ ಸರ್ಕಾರವನ್ನು ಒತ್ತಾಯಿಸಬೇಕು ಎಂದು ಸಾರ್ವಜನಿಕರಿಗೆ ಕರೆ ನೀಡಿದರು. ಸಂಸದನಾಗಿ ತಾವು ಕೇಂದ್ರದ ಸಚಿವರೊಂದಿಗೆ ಮಾತುಕತೆ ನಡೆಸಿದ್ದೇನೆ, ಮೆಟ್ರೋ ಮುಂದೆ ಪ್ರತಿಭಟನೆ ಮಾಡಿದ್ದೇನೆ, ಡಿಸಿಎಂರನ್ನು ಭೇಟಿ ಮಾಡಿ ದರ ಕಡಿಮೆ ಮಾಡುವಂತೆ ಮನವಿ ಮಾಡಿದ್ದೇನೆ, ಕೋರ್ಟ್‌ನಲ್ಲೂ ಹೋರಾಟ ನಡೆಸಿದ್ದೇನೆ ಎಂದು ತಿಳಿಸಿದರು.
ಎಲ್ಲವೂ ಕೋರ್ಟ್‌ನಿಂದಲೇ ಆಗುವುದಿಲ್ಲ. ರಾಜ್ಯ ಸರ್ಕಾರ ಮೊದಲು ಸುಳ್ಳು ಹೇಳುವುದನ್ನು ನಿಲ್ಲಿಸಬೇಕು. ತಕ್ಷಣವೇ ಹೊಸ ಫೇರ್ ಫಿಕ್ಸ್ ಕಮಿಟಿ ರಚನೆಗೆ ಸಿಎಂ ಮತ್ತು ಡಿಸಿಎಂ ಕೇಂದ್ರಕ್ಕೆ ಪತ್ರ ಬರೆಯಬೇಕು ಎಂದು ಆಗ್ರಹಿಸಿದರು.



