ನವದೆಹಲಿ: ದೇಶವನ್ನೇ ಬೆಚ್ಚಿಬೀಳಿಸಿದ್ದ ನೀಟ್-ಯುಜಿ 2026 ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ಈಗ ಮತ್ತೊಂದು ಭೀಕರ ತಿರುವು ಪಡೆದುಕೊಂಡಿದೆ. ಪರೀಕ್ಷೆ ರದ್ದುಗೊಂಡ ಆಘಾತ ತಾಳಲಾರದೆ ದೇಶದ ವಿವಿಧ ಭಾಗಗಳಲ್ಲಿ ನೀಟ್ ಆಕಾಂಕ್ಷಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ತೀವ್ರ ಚರ್ಚೆಗೆ ಕಾರಣವಾಗಿದೆ.
ರಾಜಸ್ಥಾನದ ಸಿಕಾರ್‌ನಲ್ಲಿ 22 ವರ್ಷದ ಪ್ರದೀಪ್ ಮೇಘವಾಲ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಮೂರು ವರ್ಷಗಳಿಂದ ನೀಟ್‌ಗಾಗಿ ಹಗಲು-ರಾತ್ರಿ ಶ್ರಮಿಸಿದ್ದ ಪ್ರದೀಪ್, ಈ ಬಾರಿ ಉತ್ತಮ ಅಂಕಗಳ ನಿರೀಕ್ಷೆಯಲ್ಲಿದ್ದ. ಆದರೆ ಪ್ರಶ್ನೆಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ ಪರೀಕ್ಷೆ ರದ್ದಾದ ಬಳಿಕ ಆತ ಸಂಪೂರ್ಣವಾಗಿ ಮನನೊಂದಿದ್ದ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಬಾಡಿಗೆ ಮನೆಯಲ್ಲಿ ಸಹೋದರಿಯರ ಜೊತೆ ವಾಸವಾಗಿದ್ದ ಪ್ರದೀಪ್, ಶುಕ್ರವಾರ ಮಧ್ಯಾಹ್ನ ಫ್ಯಾನ್‌ಗೆ ನೇಣು ಬಿಗಿದುಕೊಂಡಿದ್ದಾನೆ. ಸಹೋದರಿ ಗಮನಿಸಿದ ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ.
ಇದೀಗ ಈ ಪ್ರಕರಣ ರಾಷ್ಟ್ರವ್ಯಾಪಿ ಕಳವಳ ಹುಟ್ಟಿಸಿದ್ದು, ದೆಹಲಿ, ಉತ್ತರ ಪ್ರದೇಶ ಮತ್ತು ಗೋವಾ ರಾಜ್ಯಗಳಲ್ಲಿಯೂ ಇದೇ ರೀತಿಯ ಆತ್ಮಹತ್ಯೆ ಪ್ರಕರಣಗಳು ವರದಿಯಾಗಿವೆ. ಉತ್ತರ ಪ್ರದೇಶದ ರಿತಿಕ್ ಮಿಶ್ರಾ ಎಂಬ ಯುವಕ ಮೂರನೇ ಬಾರಿ ನೀಟ್ ಬರೆದು ಉತ್ತಮ ಫಲಿತಾಂಶದ ನಿರೀಕ್ಷೆಯಲ್ಲಿದ್ದರೂ, ಪ್ರಶ್ನೆಪತ್ರಿಕೆ ಸೋರಿಕೆ ವಿವಾದದ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಕುಟುಂಬ ಆರೋಪಿಸಿದೆ.
ಇದರ ನಡುವೆ ಸಿಬಿಐ ತನಿಖೆ ವೇಗ ಪಡೆದುಕೊಂಡಿದ್ದು, ಪ್ರಮುಖ ಆರೋಪಿ ಪ್ರೊಫೆಸರ್ ಪಿವಿ ಕುಲಕರ್ಣಿ ಸೇರಿದಂತೆ ಹಲವರ ಬಂಧನವಾಗಿದೆ. ದೇಶದ ವಿವಿಧ ರಾಜ್ಯಗಳಲ್ಲಿ ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಪ್ರಶ್ನೆಪತ್ರಿಕೆ ಸೋರಿಕೆ ಜಾಲದ ಬಗ್ಗೆಯೂ ತನಿಖೆ ನಡೆಯುತ್ತಿದೆ.
ಒಂದು ರಾಷ್ಟ್ರೀಯ ಮಟ್ಟದ ಪರೀಕ್ಷೆಯ ಮೇಲಿನ ನಂಬಿಕೆ ಕುಸಿದ ಪರಿಣಾಮ, ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿದ್ದು, ಕೇಂದ್ರ ಸರ್ಕಾರ ಹಾಗೂ ಪರೀಕ್ಷಾ ಸಂಸ್ಥೆಗಳ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.



