ಉಡುಪಿ:- ವಿಶ್ವಕಪ್ ಗೆದ್ದ ಅಂಧ ಮಹಿಳೆಯರ ಕ್ರಿಕೆಟ್ ತಂಡದ ಆಟಗಾರ್ತಿಯರು ಇಂದು ಉಡುಪಿ ಶ್ರೀ ಕೃಷ್ಣನ ಮಠಕ್ಕೆ ಭೇಟಿ ನೀಡಿದರು.
ನೇಪಾಳವನ್ನು ಮಣಿಸಿ ಅಂಧ ಮಹಿಳೆಯರ ಚೊಚ್ಚಲ ಟಿ-20 ವಿಶ್ವಕಪ್ ಗೆದ್ದ ಭಾರತ ತಂಡದ ಆಟಗಾರ್ತಿಯರು ಇಂದು ಉಡುಪಿ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿ, ದೇವರ ದರ್ಶನ ಪಡೆದುಕೊಂಡಿದ್ದಾರೆ.
ವಿಜೇತ ಆಟಗಾರ್ತಿಯರು ಕನಕನ ಕಿಂಡಿಯ ಮೂಲಕ ದೇವರಿಗೆ ಕೈಮುಗಿದು ಭಕ್ತಿಭಾವ ತೋರಿದರು. ಪರ್ಯಾಯ ಶ್ರೀ ಶಿರೂರು ಮಠದ ವೇದವರ್ಧನ ತೀರ್ಥರು ತಂಡಕ್ಕೆ ಗೌರವಾರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ, ತಂಡದ ಸದಸ್ಯರು ಶ್ರೀಗಳೊಂದಿಗೆ ತಮ್ಮ ಸಾಧನೆ, ಅನುಭವಗಳು ಮತ್ತು ಮುಂದಿನ ಕಾರ್ಯಕ್ರಮಗಳ ಕುರಿತು ಸಮಾಲೋಚನೆ ನಡೆಸಿದರು. ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಕೂಡ ಈ ಸಂದರ್ಭದಲ್ಲಿ ಆಟಗಾರ್ತಿಯರೊಂದಿಗೆ ಮಾತನಾಡಿ, ಅವರ ಪ್ರಯತ್ನಗಳನ್ನು ಮೆಚ್ಚಿ ಪ್ರೋತ್ಸಾಹ ನೀಡಿದರು.
ಮಠದಲ್ಲಿ ಪ್ರಸಾದ ಸ್ವೀಕರಿಸಿದ ತಂಡ, ನಾಳೆ ನಡೆಯಲಿರುವ ಮಣಿಪಾಲ್ ಮ್ಯಾರಥಾನ್‌ನಲ್ಲಿ ಭಾಗವಹಿಸಲು ಸಿದ್ಧತೆಗೊಳಗಾದರು. ಈ ಭೇಟಿ ಮೂಲಕ ಅಂಧ ಮಹಿಳೆಯರ ಕ್ರಿಕೆಟ್ ತಂಡದ ಸಾಧನೆಗೆ ಉಡುಪಿ ವಾಸಿಗಳಿಂದ ಶುಭಾಶಯ ಕೋರಲಾಗಿದೆ.



