ಮುಂಬೈ: ಮುಂಬೈನ ಎಂಸಿಎ ಕ್ರೀಡಾಂಗಣದಲ್ಲಿ ನಡೆದ ರಣಜಿ ಟ್ರೋಫಿ 2025–26ರ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಬಲಿಷ್ಠ ಮುಂಬೈ ತಂಡವನ್ನು ಮಣಿಸಿದ ಕರ್ನಾಟಕ, ಸೆಮಿಫೈನಲ್ ಸುತ್ತಿಗೆ ಅರ್ಹತೆ ಪಡೆದುಕೊಂಡಿದೆ. ಮುಂಬೈ ನೀಡಿದ್ದ 326 ರನ್ಗಳ ಗುರಿಯನ್ನು ಕರ್ನಾಟಕ ನಾಲ್ಕನೇ ದಿನದಾಟದ ಎರಡನೇ ಸೆಷನ್ನಲ್ಲಿ 6 ವಿಕೆಟ್ ನಷ್ಟಕ್ಕೆ ಯಶಸ್ವಿಯಾಗಿ ಬೆನ್ನಟ್ಟುವ ಮೂಲಕ ಮಹತ್ವದ ಗೆಲುವು ದಾಖಲಿಸಿದೆ.
ಕರ್ನಾಟಕದ ಈ ಐತಿಹಾಸಿಕ ಜಯದಲ್ಲಿ ಅನುಭವಿ ಬ್ಯಾಟ್ಸ್ಮನ್ ಕೆಎಲ್ ರಾಹುಲ್ ಪ್ರಮುಖ ಪಾತ್ರ ವಹಿಸಿದರು. ರಾಹುಲ್ 130 ರನ್ಗಳ ಜವಾಬ್ದಾರಿಯುತ ಇನ್ನಿಂಗ್ಸ್ ಆಡಿ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು. ಅವರಿಗೆ ಸಾಥ್ ನೀಡಿದ ಆರ್. ಸ್ಮರಣ್ ಅಜೇಯ 83 ರನ್ಗಳನ್ನು ಬಾರಿಸಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.
ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ, ಕರ್ನಾಟಕದ ಕಟ್ಟುನಿಟ್ಟಿನ ಬೌಲಿಂಗ್ ದಾಳಿಗೆ ತತ್ತರಿಸಿ ಮೊದಲ ಇನ್ನಿಂಗ್ಸ್ನಲ್ಲಿ ಕೇವಲ 120 ರನ್ಗಳಿಗೆ ಆಲೌಟ್ ಆಯಿತು. ತಂಡದ ಪರ ಅಖಿಲ್ ಹೆರ್ವಾಡ್ಕರ್ 60 ರನ್ ಗಳಿಸಿದರೆ, ಉಳಿದ ಬ್ಯಾಟ್ಸ್ಮನ್ಗಳು ಗಮನಾರ್ಹ ಕೊಡುಗೆ ನೀಡಲಿಲ್ಲ. ಕರ್ನಾಟಕ ಪರ ವಿದ್ವತ್ ಕಾವೇರಪ್ಪ, ಪ್ರಸಿದ್ಧ್ ಕೃಷ್ಣ ಹಾಗೂ ಶ್ರೇಯಸ್ ಗೋಪಾಲ್ ತಲಾ ಮೂರು ವಿಕೆಟ್ಗಳನ್ನು ಪಡೆದು ಮಿಂಚಿದರು.
ಮೊದಲ ಇನ್ನಿಂಗ್ಸ್ ಆರಂಭಿಸಿದ ಕರ್ನಾಟಕವೂ ದೊಡ್ಡ ಮೊತ್ತ ಕಲೆಹಾಕಲು ವಿಫಲವಾಯಿತು. ತಂಡದ ಪರ ಮಯಾಂಕ್ ಅಗರ್ವಾಲ್ 92 ರನ್ಗಳ ಅತ್ಯುತ್ತಮ ಇನ್ನಿಂಗ್ಸ್ ಆಡಿ ತಂಡಕ್ಕೆ ಆಧಾರ ಒದಗಿಸಿದರು. ಆದರೆ ಇತರ ಬ್ಯಾಟ್ಸ್ಮನ್ಗಳ ವೈಫಲ್ಯದಿಂದ ಕರ್ನಾಟಕ 173 ರನ್ಗಳಿಗೆ ಆಲೌಟ್ ಆಯಿತು. ಇದರಿಂದ ಮೊದಲ ಇನ್ನಿಂಗ್ಸ್ನಲ್ಲಿ ಕರ್ನಾಟಕಕ್ಕೆ 53 ರನ್ಗಳ ಮುನ್ನಡೆ ಲಭಿಸಿತು.
ಎರಡನೇ ಇನ್ನಿಂಗ್ಸ್ನಲ್ಲಿ ಮುಂಬೈ ಭರ್ಜರಿ ಪ್ರದರ್ಶನ ತೋರಿ 377 ರನ್ಗಳನ್ನು ಕಲೆಹಾಕಿತು. ಆಕಾಶ್ ಆನಂದ್ 70 ರನ್ಗಳ ಇನ್ನಿಂಗ್ಸ್ ಆಡಿದರೆ, ಇತರ ಆಟಗಾರರು ಸಹ ಉಪಯುಕ್ತ ಕೊಡುಗೆ ನೀಡಿದರು. ಇದರಿಂದ ಕರ್ನಾಟಕದ ಮುಂದಿಟ್ಟ ಗುರಿ 325 ರನ್ಗಳಾಗಿತ್ತು.
ನಾಲ್ಕನೇ ದಿನ ಗುರಿ ಬೆನ್ನಟ್ಟಿದ ಕರ್ನಾಟಕ, ಕೆಎಲ್ ರಾಹುಲ್ ಅವರ ಪ್ರಥಮ ದರ್ಜೆ ವೃತ್ತಿಜೀವನದ 25ನೇ ಶತಕದ ನೆರವಿನಿಂದ ಆತ್ಮವಿಶ್ವಾಸದ ಆಟವಾಡಿತು. 147 ಎಸೆತಗಳಲ್ಲಿ 13 ಬೌಂಡರಿಗಳೊಂದಿಗೆ ಶತಕ ಪೂರೈಸಿದ ರಾಹುಲ್, ನಂತರವೂ ತಾಳ್ಮೆಯಿಂದ ಬ್ಯಾಟಿಂಗ್ ಮಾಡಿ ತಂಡವನ್ನು 250 ರನ್ಗಳ ಗಡಿ ದಾಟಿಸಿದರು. ಸ್ಮರಣ್ 123 ಎಸೆತಗಳಲ್ಲಿ 11 ಬೌಂಡರಿಗಳೊಂದಿಗೆ ಅಜೇಯ 83 ರನ್ಗಳ ಇನ್ನಿಂಗ್ಸ್ ಆಡಿದರು. ಅಂತಿಮವಾಗಿ ವಿದ್ಯಾದರ್ ಪಾಟೀಲ್ ಅಜೇಯ 31 ರನ್ಗಳ ಸಹಾಯದಿಂದ ಕರ್ನಾಟಕವನ್ನು ಸೆಮಿಫೈನಲ್ಗೆ ಕರೆದೊಯ್ದರು.



