ಭಾರತದ ಉದಯೋನ್ಮುಖ ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿ ಅವರ ಪ್ರತಿಭೆ ಮತ್ತು ಆತ್ಮವಿಶ್ವಾಸದ ಬಗ್ಗೆ ಕ್ರಿಕೆಟ್ ವಲಯದಲ್ಲಿ ಚರ್ಚೆಗಳು ಮುಂದುವರಿದಿವೆ.
ಈ ಬಾರಿ ಅವರ ಬಗ್ಗೆ ವಿಶೇಷವಾಗಿ ಮಾತನಾಡಿರುವುದು ರಾಜಸ್ಥಾನ್ ರಾಯಲ್ಸ್ ತಂಡದ ಮುಖ್ಯ ಕೋಚ್ ಕುಮಾರ್ ಸಂಗಕ್ಕಾರ. ಇಂಗ್ಲೆಂಡ್ ಹಾಗೂ ನ್ಯೂಝಿಲೆಂಡ್ ನಡುವಿನ ಟೆಸ್ಟ್ ಪಂದ್ಯದ ವೇಳೆ ‘ಸ್ಕೈ ಕ್ರಿಕೆಟ್’ಗೆ ನೀಡಿದ ಸಂದರ್ಶನದಲ್ಲಿ ಸಂಗಕ್ಕಾರ, ವೈಭವ್ ಅವರ ಅಸಾಧಾರಣ ಆತ್ಮವಿಶ್ವಾಸದ ಘಟನೆಯನ್ನು ಹಂಚಿಕೊಂಡಿದ್ದಾರೆ.
ಐಪಿಎಲ್ 2026ರ 64ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ತಂಡ ಕಣಕ್ಕಿಳಿದಿತ್ತು. ಮೊದಲು ಬ್ಯಾಟ್ ಮಾಡಿದ ಲಕ್ನೋ ತಂಡ 220 ರನ್ಗಳ ಬೃಹತ್ ಮೊತ್ತ ಕಲೆಹಾಕಿತ್ತು. ಪ್ಲೇಆಫ್ ಆಸೆ ಜೀವಂತವಾಗಿರಿಸಿಕೊಳ್ಳಬೇಕಿದ್ದ ರಾಜಸ್ಥಾನ್ಗೆ ಈ ಪಂದ್ಯ ಗೆಲ್ಲುವುದು ಅತ್ಯಗತ್ಯವಾಗಿತ್ತು.
ಇಂತಹ ಒತ್ತಡದ ಸಂದರ್ಭದಲ್ಲಿ ಕೇವಲ 15 ವರ್ಷದ ವೈಭವ್ ಸೂರ್ಯವಂಶಿ ಬ್ಯಾಟಿಂಗ್ಗೆ ತೆರಳುವ ಮುನ್ನ ಕೋಚ್ ಕುಮಾರ್ ಸಂಗಕ್ಕಾರ ಅವರ ಬಳಿ ಬಂದು, “ಕೋಚ್, ನೀವು ಚಿಂತಿಸಬೇಡಿ… ಪಂದ್ಯ ಮುಗಿದಂತೆಯೇ,” ಎಂದು ಆತ್ಮವಿಶ್ವಾಸದಿಂದ ಹೇಳಿ ಮೈದಾನಕ್ಕಿಳಿದಿದ್ದರು ಎಂದು ಸಂಗಕ್ಕಾರ ನೆನಪಿಸಿಕೊಂಡಿದ್ದಾರೆ.
ಅಷ್ಟೇ ಅಲ್ಲ, ಡಗೌಟ್ನಲ್ಲಿದ್ದ ಸಹ ಆಟಗಾರರಾದ ಡೊನೊವನ್ ಫೆರೇರಾ ಹಾಗೂ ಲುಹಾನ್-ಡ್ರೆ ಪ್ರಿಟೋರಿಯಸ್ ಅವರ ಬಳಿಗೂ ತೆರಳಿ, “ಇಂದು ನಾನು 13 ಸಿಕ್ಸರ್ಗಳನ್ನು ಹೊಡೆಯುತ್ತೇನೆ. ನಾನು ಔಟಾದ ನಂತರ ಉಳಿದ ರನ್ಗಳನ್ನು ನೀವು ಪೂರ್ಣಗೊಳಿಸಿ,” ಎಂದು ಹೇಳಿದ್ದರಂತೆ.
ವೈಭವ್ ಬ್ಯಾಟಿಂಗ್ ಆರಂಭಿಸಿದ ಕೆಲವೇ ಕ್ಷಣಗಳಲ್ಲಿ ಸತತ ಸಿಕ್ಸರ್ಗಳ ಸುರಿಮಳೆ ಆರಂಭವಾಗಿತ್ತು. ಆರಂಭದಲ್ಲೇ ಐದು ಸಿಕ್ಸರ್ಗಳನ್ನು ಸಿಡಿಸುತ್ತಿದ್ದಂತೆ, ಡಗೌಟ್ನಲ್ಲಿದ್ದ ಆಟಗಾರರು ಅಚ್ಚರಿಗೊಂಡಿದ್ದರು. “ಈ ಹುಡುಗ ಹೇಳಿದ್ದನ್ನೇ ಮಾಡುತ್ತಿದ್ದಾನೆ. ಈಗ ಇವನು ಎಷ್ಟು ಸಿಕ್ಸರ್ ಹೊಡೆಯುತ್ತಾನೆ ಎಂಬುದನ್ನು ಎಣಿಸಲು ಶುರು ಮಾಡೋಣ,” ಎಂದು ತಮ್ಮೊಳಗೆ ಮಾತನಾಡಿಕೊಂಡಿದ್ದರು ಎಂದು ಸಂಗಕ್ಕಾರ ತಿಳಿಸಿದ್ದಾರೆ.
ಆ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಕೇವಲ 48 ಎಸೆತಗಳಲ್ಲಿ 93 ರನ್ಗಳ ಸ್ಫೋಟಕ ಇನ್ನಿಂಗ್ಸ್ ಆಡಿದ್ದರು. ಅವರ ಬ್ಯಾಟ್ನಿಂದ 10 ಸಿಕ್ಸರ್ ಹಾಗೂ ಹಲವು ಬೌಂಡರಿಗಳು ಮೂಡಿಬಂದಿದ್ದವು. 13 ಸಿಕ್ಸರ್ ಹೊಡೆಯುವ ತಮ್ಮ ಮಾತನ್ನು ಮೂರು ಸಿಕ್ಸರ್ಗಳಿಂದ ತಪ್ಪಿಸಿಕೊಂಡರೂ, ತಂಡಕ್ಕೆ ಏಳು ವಿಕೆಟ್ಗಳ ಅಮೋಘ ಗೆಲುವು ತಂದುಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ವೈಭವ್ ಅವರ ಆತ್ಮವಿಶ್ವಾಸವನ್ನು ಶ್ಲಾಘಿಸಿದ ಕುಮಾರ್ ಸಂಗಕ್ಕಾರ, “ಇಂತಹ ಆತ್ಮವಿಶ್ವಾಸ ಎಲ್ಲರಲ್ಲೂ ಇರುವುದಿಲ್ಲ. ವೈಭವ್ ಕೇವಲ ಪ್ರತಿಭಾವಂತ ಆಟಗಾರ ಮಾತ್ರವಲ್ಲ, ಮುಂದಿನ ದಿನಗಳಲ್ಲಿ ವಿಶ್ವ ಕ್ರಿಕೆಟ್ನಲ್ಲಿ ದೊಡ್ಡ ಮಟ್ಟದ ಸಾಧನೆ ಮಾಡುವ ಸಾಮರ್ಥ್ಯ ಹೊಂದಿರುವ ಆಟಗಾರ. ಭವಿಷ್ಯದಲ್ಲಿ ಕ್ರಿಕೆಟ್ ಜಗತ್ತಿನ ಸೂಪರ್ಸ್ಟಾರ್ ಆಗುವ ಎಲ್ಲಾ ಗುಣಗಳು ಆತನಲ್ಲಿವೆ,” ಎಂದು ಪ್ರಶಂಸಿಸಿದ್ದಾರೆ.



