ದಾವಣಗೆರೆ: ಮುಖ್ಯಮಂತ್ರಿ ಸ್ಥಾನಕ್ಕೆ 80–90 ಶಾಸಕರ ಬೆಂಬಲವಿದೆ ಎನ್ನುವ ವಿಚಾರವೇ ಪ್ರಶ್ನೆಯಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ. ಪಕ್ಷವನ್ನು ಮುನ್ನಡೆಸುವ ಸಾಮರ್ಥ್ಯ ಹೊಂದಿರುವ ಸಮರ್ಥರಿಗೆ ಅವಕಾಶ ಸಿಗುವುದು ಸಹಜ, ಆದರೆ ಅಂತಹ ಸಂದರ್ಭ ಇನ್ನೂ ಬಂದಿಲ್ಲ. ಬಂದಾಗ ಅದರ ಬಗ್ಗೆ ಚರ್ಚೆ ಮಾಡೋಣ ಎಂದು ಹೇಳಿದರು.
ದಾವಣಗೆರೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸತೀಶ್ ಜಾರಕಿಹೊಳಿ, ಅಧಿಕಾರ ಹಂಚಿಕೆ ವಿಚಾರವಾಗಿ ನಿರ್ಮಾಣವಾಗಿರುವ ಗೊಂದಲ ಶೀಘ್ರದಲ್ಲೇ ಬಗೆಹರಿಯುವ ನಿರೀಕ್ಷೆ ಇತ್ತು. ಆದರೆ ಈ ವಿಚಾರದಲ್ಲಿ ಏಕೆ ವಿಳಂಬವಾಗುತ್ತಿದೆ ಎಂಬುದು ತಿಳಿಯುತ್ತಿಲ್ಲ.
ಈ ಸಂಬಂಧ ಹೈಕಮಾಂಡ್ ತೀರ್ಮಾನ ಕೈಗೊಳ್ಳಬೇಕಿದ್ದು, ಅಲ್ಲಿಯವರೆಗೆ ಕಾಯುವುದು ಅನಿವಾರ್ಯವಾಗಿದೆ. ಗೊಂದಲ ಬೇಗ ಬಗೆಹರಿಯಲಿದೆ ಎಂಬ ಆಶಾವಾದ ನಮ್ಮದು ಎಂದರು.
ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ 80–90 ಶಾಸಕರ ಬೆಂಬಲವಿದ್ದು, ಅವರನ್ನು ಮುಖ್ಯಮಂತ್ರಿ ಮಾಡಲು ಹೈಕಮಾಂಡ್‌ಗೆ ಮನವಿ ಮಾಡಿದ್ದೇವೆ ಎಂಬ ರಾಮನಗರ ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಶಾಸಕರ ಸಂಖ್ಯೆಯ ಆಧಾರದ ಮೇಲೆ ಚರ್ಚೆ ನಡೆಯುವುದಿಲ್ಲ ಎಂದು ಹೇಳಿದರು.



