ನವದೆಹಲಿ: ಗುಂಡಿಯಲ್ಲಿ ಬೈಕ್ ಸವಾರ ಸಾವನ್ನಪ್ಪಿದ ಘಟನೆಗೆ ಐದು ದಿನಗಳ ಬಳಿಕ, ತೆರೆದ ಮ್ಯಾನ್ಹೋಲ್ಗೆ ಬಿದ್ದು ಕಾರ್ಮಿಕನೊಬ್ಬ ಮೃತಪಟ್ಟಿರುವ ಘಟನೆ ದೆಹಲಿಯಲ್ಲಿ ನಡೆದಿದೆ.ದೆಹಲಿಯ ರೋಹಿಣಿ ಪ್ರದೇಶದ ಸೆಕ್ಟರ್ 32ರಲ್ಲಿ ಈ ದುರ್ಘಟನೆ ಸಂಭವಿಸಿದೆ. ಬಿಹಾರದ ಸಮಸ್ತಿಪುರ ಜಿಲ್ಲೆಯ ನಿವಾಸಿ ಬಿರ್ಜು ಕುಮಾರ್ ರೈ ಒಳಚರಂಡಿ ಮ್ಯಾನ್ಹೋಲ್ಗೆ ಬಿದ್ದು ಮೃತಪಟ್ಟಿದ್ದಾರೆ.
ಬೇಗಂಪುರ ಪ್ರದೇಶದ ಮಹಾಶಕ್ತಿ ಕಾಳಿ ದೇವಸ್ಥಾನದ ಸಮೀಪ ಈ ಘಟನೆ ನಡೆದಿದೆ. ಬಿರ್ಜು ತನ್ನ ಸ್ನೇಹಿತನೊಂದಿಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಆಕಸ್ಮಿಕವಾಗಿ ತೆರೆದಿದ್ದ ಒಳಚರಂಡಿ ಮ್ಯಾನ್ಹೋಲ್ಗೆ ಬಿದ್ದಿದ್ದಾರೆ. ಅವನ ಮುಂದೆ ನಡೆದುಕೊಂಡು ಹೋಗುತ್ತಿದ್ದ ಸ್ನೇಹಿತನಿಗೆ ಈ ಘಟನೆ ನಡೆದಿರುವುದು ತಕ್ಷಣ ಗಮನಕ್ಕೆ ಬಂದಿರಲಿಲ್ಲ. ಮಂಗಳವಾರವಷ್ಟೇ ಘಟನೆ ಬೆಳಕಿಗೆ ಬಂದಿದೆ ಎಂದು ತಿಳಿದುಬಂದಿದೆ.
ಇತ್ತೀಚೆಗೆ ನೆರೆಯ ನೋಯ್ಡಾದಲ್ಲೂ ಸಮಾನ ಘಟನೆ ನಡೆದಿತ್ತು. ಕಳೆದ ತಿಂಗಳು 27 ವರ್ಷದ ಸಾಫ್ಟ್ವೇರ್ ಎಂಜಿನಿಯರ್ ಯುವರಾಜ್ ಮೆಹ್ತಾ ಅವರು ದಟ್ಟ ಮಂಜಿನ ನಡುವಲ್ಲಿ ಕಾರು ಚಾಲನೆ ಮಾಡುವ ವೇಳೆ ಅಪಘಾತಕ್ಕೀಡಾಗಿ ಮೃತಪಟ್ಟಿದ್ದರು. ಸೆಕ್ಟರ್ 150ರಲ್ಲಿ ತಮ್ಮ ಅಪಾರ್ಟ್ಮೆಂಟ್ ಕಟ್ಟಡದತ್ತ ತಿರುವು ಪಡೆಯುವಾಗ ರಸ್ತೆ ಹಾಗೂ ಹೊಂಡದ ನಡುವೆ ಇರುವ ಚರಂಡಿಯ ಬಳಿ ಸುರಕ್ಷತಾ ತಡೆಗೋಡೆಗಳಿದ್ದರೂ ದುರ್ಘಟನೆ ಸಂಭವಿಸಿತ್ತು.



