ಮೈಸೂರು:- ನಗರದಲ್ಲಿ ಮಾದಕ ವಸ್ತುಗಳ ಜಾಲವನ್ನು ಬೇಧಿಸುವ ಉದ್ದೇಶದಿಂದ ಸಿಸಿಬಿ ಹಾಗೂ ಮಂಡಿ ಪೊಲೀಸರು ಸಂಯುಕ್ತವಾಗಿ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಒಟ್ಟು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ಮಾದಕವಸ್ತು ಮುಕ್ತ ಮೈಸೂರಿಗಾಗಿ ಪೊಲೀಸರು ಕಾರ್ಯಾಚರಣೆಗಳನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ. ಮೊದಲ ಪ್ರಕರಣದಲ್ಲಿ ಮೊಹಮ್ಮದ್ ಕರೀಂ ಹಾಗೂ ನಿಷಾದ್ ಪಾಷಾ ಎಂಬ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೊಹಮ್ಮದ್ ಕರೀಂ ವಿರುದ್ಧ ಈಗಾಗಲೇ ಐದು ಎನ್‌ಡಿಪಿಎಸ್ ಪ್ರಕರಣಗಳು ದಾಖಲಾಗಿದ್ದರೆ, ನಿಷಾದ್ ಪಾಷಾ ವಿರುದ್ಧ ಐದು ಕ್ರಿಮಿನಲ್ ಪ್ರಕರಣಗಳಿವೆ. ಇವರಿಂದ 3.14 ಗ್ರಾಂ ಎಂಡಿಎಂಎ ಸಿಂಥೆಟಿಕ್ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ.
ಮಹಾರಾಷ್ಟ್ರದಲ್ಲಿ ದೊಡ್ಡ ಪ್ರಮಾಣದ ಡ್ರಗ್ಸ್ ಪತ್ತೆಯಾದ ಹಿನ್ನೆಲೆ ಕರ್ನಾಟಕದಲ್ಲಿಯೂ ಪೊಲೀಸರು ತೀವ್ರ ತಪಾಸಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಇನ್ನೊಂದು ಪ್ರಕರಣದಲ್ಲಿ ಸಂಜಯ್ ಹಾಗೂ ರಾಜ್‌ಕುಮಾರ್ ಎಂಬುವರನ್ನು ಬಂಧಿಸಲಾಗಿದ್ದು, ಇವರಿಂದ 585 ಗ್ರಾಂ ಗಾಂಜಾ ವಶಕ್ಕೆ ಪಡೆಯಲಾಗಿದೆ. ಗಾಂಜಾ ಸಾಗಾಟಕ್ಕೆ ಬಳಸಲಾಗುತ್ತಿದ್ದ ಟಿವಿಎಸ್ ಬೈಕ್ ಕೂಡ ಜಪ್ತಿ ಮಾಡಲಾಗಿದೆ.
ಮೂರನೇ ಪ್ರಕರಣದಲ್ಲಿ ರಾಜೀವ್ ನಗರದ ನಿವಾಸಿ ಮೊಹಮ್ಮದ್ ಅಫಾಕ್ ಎಂಬುವನನ್ನು ಬಂಧಿಸಲಾಗಿದ್ದು, ಈತ ಡ್ರಗ್ಸ್ ಜಾಲದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಡ್ರಗ್ಸ್ ಹಾವಳಿಯನ್ನು ಸಂಪೂರ್ಣವಾಗಿ ನಿಯಂತ್ರಿಸುವ ಉದ್ದೇಶದಿಂದ ಮೈಸೂರು ಪೊಲೀಸರು ‘ವಿಮುಕ್ತಿ’ ಹೆಸರಿನಲ್ಲಿ ವಿಶೇಷ ಸಹಾಯವಾಣಿ (8277948080) ಆರಂಭಿಸಿದ್ದಾರೆ. ಡ್ರಗ್ಸ್ ಮಾರಾಟ, ಸೇವನೆ ಅಥವಾ ಸಾಗಾಟದ ಬಗ್ಗೆ ಮಾಹಿತಿ ಇದ್ದರೆ ತಕ್ಷಣ ಕರೆ ಮಾಡುವಂತೆ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಮಾಹಿತಿ ನೀಡುವವರ ವಿವರಗಳನ್ನು ಸಂಪೂರ್ಣವಾಗಿ ರಹಸ್ಯವಾಗಿಡಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ.
ನಗರದಾದ್ಯಂತ ಡ್ರಗ್ಸ್ ಪೆಡ್ಲರ್‌ಗಳ ಮೇಲೆ ತೀವ್ರ ನಿಗಾ ಇರಿಸಲಾಗಿದ್ದು, ಕಾಲೇಜುಗಳು ಹಾಗೂ ಹಾಸ್ಟೆಲ್‌ಗಳ ಸುತ್ತಮುತ್ತ ಗಸ್ತು ಹೆಚ್ಚಿಸಲಾಗಿದೆ. ಮಾದಕ ವಸ್ತು ಚಟುವಟಿಕೆಯಲ್ಲಿ ತೊಡಗುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಎಚ್ಚರಿಸಿದ್ದಾರೆ.



