HomeBengaluru NewsBTS ಪ್ರಭಾವ; ಕೊರಿಯಾಗೆ ಹೋಗಲು ಮನೆ ತೊರೆದ 13 ವರ್ಷದ ಬಾಲಕಿ, ಮೆಟ್ರೋದಲ್ಲಿ ರಕ್ಷಣೆ

BTS ಪ್ರಭಾವ; ಕೊರಿಯಾಗೆ ಹೋಗಲು ಮನೆ ತೊರೆದ 13 ವರ್ಷದ ಬಾಲಕಿ, ಮೆಟ್ರೋದಲ್ಲಿ ರಕ್ಷಣೆ

For Dai;y Updates Join Our whatsapp Group

ಬೆಂಗಳೂರು: ಕೊರಿಯನ್ ಹಾಡುಗಳು, ಸಿನಿಮಾಗಳು ಮತ್ತು ವೆಬ್‌ ಸೀರೀಸ್‌ಗಳನ್ನು ವೀಕ್ಷಿಸುತ್ತಿದ್ದ 13 ವರ್ಷದ ಬಾಲಕಿಯೊಬ್ಬಳು ದಕ್ಷಿಣ ಕೊರಿಯಾಗೆ ತೆರಳಿ BTS ಪಾಪ್‌ ಬ್ಯಾಂಡ್‌ ಸದಸ್ಯರನ್ನು ಭೇಟಿಯಾಗಬೇಕು ಎಂಬ ಆಸೆಯಿಂದ ಮನೆ ತೊರೆದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬಾಲಕಿ ಮಧ್ಯರಾತ್ರಿ ಅತ್ತಿಗುಪ್ಪೆ ಮೆಟ್ರೋ ನಿಲ್ದಾಣದಲ್ಲಿ ಪತ್ತೆಯಾಗಿದ್ದು, ಚಂದ್ರಾ ಲೇಔಟ್ ಠಾಣೆಯ ಹೊಯ್ಸಳ ಪೊಲೀಸರು ಆಕೆಯನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ.

ಮಹಾರಾಷ್ಟ್ರ ಮೂಲದ ದಂಪತಿ ಬೆಂಗಳೂರಿನಲ್ಲಿ ಉದ್ಯೋಗ ಮಾಡಿಕೊಂಡು ಹೆಬ್ಬಗೋಡಿಯಲ್ಲಿ ವಾಸವಾಗಿದ್ದಾರೆ. ಅವರ ಪುತ್ರಿಯಾಗಿರುವ 13 ವರ್ಷದ ಬಾಲಕಿ ಕೊರಿಯನ್ ಸಿನಿಮಾಗಳು, ವೆಬ್‌ ಸೀರೀಸ್‌ಗಳು ಹಾಗೂ ಹಾಡುಗಳನ್ನು ನಿರಂತರವಾಗಿ ವೀಕ್ಷಿಸುತ್ತಿದ್ದಳು ಎನ್ನಲಾಗಿದೆ. BTS ಬ್ಯಾಂಡ್‌ನಿಂದ ಪ್ರಭಾವಿತಳಾಗಿದ್ದ ಆಕೆ, ಕೊರಿಯಾಗೆ ತೆರಳಿ ತಂಡದ ಸದಸ್ಯರನ್ನು ಭೇಟಿಯಾಗಬೇಕು ಎಂಬ ಆಸೆಯನ್ನು ವ್ಯಕ್ತಪಡಿಸುತ್ತಿದ್ದಳು.

ಬಾಲಕಿ ಕೊರಿಯನ್ ಸಂಸ್ಕೃತಿಯ ಬಗ್ಗೆ ಹೆಚ್ಚಿನ ಆಸಕ್ತಿ ಬೆಳೆಸಿಕೊಂಡಿದ್ದು, ತನ್ನ ವೇಷಭೂಷಣ, ಮಾತಿನ ಶೈಲಿ ಹಾಗೂ ಹಾವಭಾವಗಳಲ್ಲೂ ಅದನ್ನು ಅನುಸರಿಸುತ್ತಿದ್ದಳು ಎನ್ನಲಾಗಿದೆ. ದಕ್ಷಿಣ ಕೊರಿಯಾಗೆ ಹೋಗಬೇಕು ಎಂದು ಮನೆಯಲ್ಲಿ ಆಗಾಗ್ಗೆ ಹೇಳುತ್ತಿದ್ದ ಬಾಲಕಿ, ಬುಧವಾರ ಬೆಳಗ್ಗೆ ಯಾರಿಗೂ ತಿಳಿಸದೆ ಮನೆಯಿಂದ ಹೊರಟಿದ್ದಳು.

ದಿನವಿಡೀ ನಗರದ ವಿವಿಧೆಡೆ ಸುತ್ತಾಡಿದ ಬಳಿಕ ಮಧ್ಯರಾತ್ರಿ ಅತ್ತಿಗುಪ್ಪೆ ಮೆಟ್ರೋ ನಿಲ್ದಾಣಕ್ಕೆ ತಲುಪಿದ್ದಳು. ಟಿಕೆಟ್ ಇಲ್ಲದೆ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಬಾಲಕಿಯನ್ನು ಮೆಟ್ರೋ ಭದ್ರತಾ ಸಿಬ್ಬಂದಿ ಗಮನಿಸಿದ್ದಾರೆ. ತಕ್ಷಣ 112 ತುರ್ತು ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.

ಮಾಹಿತಿ ಪಡೆದ ಚಂದ್ರಾ ಲೇಔಟ್ ಠಾಣೆಯ ಹೊಯ್ಸಳ ಪೊಲೀಸರು ಸ್ಥಳಕ್ಕೆ ತೆರಳಿ ಬಾಲಕಿಯನ್ನು ರಕ್ಷಿಸಿದ್ದಾರೆ. ವಿಚಾರಣೆ ವೇಳೆ ಬಾಲಕಿ ಮನೆ ತೊರೆದಿರುವುದಕ್ಕೆ ಕಾರಣ ತಿಳಿದುಬಂದಿದೆ.

ಇದೇ ವೇಳೆ ಬಾಲಕಿ ಕಾಣೆಯಾಗಿರುವ ಕುರಿತು ಆಕೆಯ ಪೋಷಕರು ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಚಂದ್ರಾ ಲೇಔಟ್ ಪೊಲೀಸರು ಹೆಬ್ಬಗೋಡಿ ಪೊಲೀಸರನ್ನು ಸಂಪರ್ಕಿಸಿ ಮಾಹಿತಿ ನೀಡಿದ್ದು, ಬಳಿಕ ಪೋಷಕರನ್ನು ಠಾಣೆಗೆ ಕರೆಸಿದ್ದಾರೆ.

ಬಾಲಕಿಗೆ ಸೂಕ್ತ ಕೌನ್ಸೆಲಿಂಗ್‌ ನೀಡಿದ ಪೊಲೀಸರು, ಆಕೆಯನ್ನು ಸುರಕ್ಷಿತವಾಗಿ ಪೋಷಕರ ವಶಕ್ಕೆ ಒಪ್ಪಿಸಿದ್ದಾರೆ. ಮಕ್ಕಳ ಮೊಬೈಲ್ ಬಳಕೆ, ಸಾಮಾಜಿಕ ಜಾಲತಾಣ ಹಾಗೂ ಆನ್‌ಲೈನ್‌ ಕಂಟೆಂಟ್‌ ವೀಕ್ಷಣೆ ಕುರಿತು ಪೋಷಕರು ಹೆಚ್ಚಿನ ಗಮನಹರಿಸುವಂತೆ ಪೊಲೀಸರು ಸಲಹೆ ನೀಡಿದ್ದಾರೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img