ಪ್ಯಾರಿಸ್ ಫ್ಯಾಷನ್ ವೀಕ್‌ನಲ್ಲಿ ಮತ್ತೆ ಮಿಂಚಿದ್ದಾರೆ ಬ್ಯೂಟಿ ಕ್ವೀನ್ ಐಶ್ವರ್ಯಾ ರೈ ಬಚ್ಚನ್. ಈ ಬಾರಿ ಐಶ್ವರ್ಯಾ ಅವರ ಬ್ಲಾಕ್ ಕೌಚರ್ ಲುಕ್ ಮಾತ್ರವಲ್ಲ, ತಲೆಯ ಮೇಲಿದ್ದ ಮಿನುಗುವ ಡೈಮಂಡ್ ಕಿರೀಟವೂ ಎಲ್ಲರ ಗಮನ ಸೆಳೆದಿದೆ.
ಸೆಪ್ಟೆಂಬರ್ 28ರಂದು ನಡೆದ ಲೊರಿಯಲ್ ಪ್ಯಾರಿಸ್‌ನ ‘ಲೆ ಡೆಫಿಲೆ’ ಶೋನಲ್ಲಿ ಐಶ್ವರ್ಯಾ ರೈ ರಾಯಲ್ ಲುಕ್‌ನಲ್ಲಿ ರನ್‌ವೇ ಮೇಲೆ ಹೆಜ್ಜೆ ಹಾಕಿದ್ದಾರೆ. ಐಫೆಲ್ ಟವರ್ ಹಿನ್ನೆಲೆಯ ಅದ್ದೂರಿ ವೇದಿಕೆಯಲ್ಲಿ ಆಲ್-ಬ್ಲಾಕ್ ಅವತಾರದಲ್ಲಿ ಕಾಣಿಸಿಕೊಂಡ ಐಶ್ವರ್ಯಾ, ತಮ್ಮ ಸ್ಟೈಲ್ ಮತ್ತು ಗ್ಲಾಮರ್‌ನಿಂದ ಫ್ಯಾಷನ್ ಪ್ರಿಯರ ಗಮನ ಸೆಳೆದಿದ್ದಾರೆ.
ಐಶ್ವರ್ಯಾ ಧರಿಸಿದ್ದ ಟೂ-ಪೀಸ್ ಬ್ಲಾಕ್ ವೆಲ್ವೆಟ್ ಗೌನ್‌ಗೆ 3D ಫ್ರಿಂಜ್ ಎಂಬ್ರಾಯ್ಡರಿ ಮಾಡಲಾಗಿತ್ತು. ಇದರ ಮೇಲೆ ಮುತ್ತು ಮತ್ತು ಕ್ರಿಸ್ಟಲ್‌ಗಳಿಂದ ಅಲಂಕರಿಸಿದ ವೆಲ್ವೆಟ್ ಕೇಪ್ ಧರಿಸಿದ್ದರು. ಸಿರಿಯಾದ ಐಷಾರಾಮಿ ಲೇಬಲ್ ಯಾರಾ ಶೂಮೇಕರ್ ವಿನ್ಯಾಸಗೊಳಿಸಿದ ಈ ಕಸ್ಟಮ್ ಡ್ರೆಸ್‌ಗೆ ಸೆಲೆಬ್ರಿಟಿ ಸ್ಟೈಲಿಸ್ಟ್ ಮೋಹಿತ್ ರೈ ಸ್ಟೈಲಿಂಗ್ ಮಾಡಿದ್ದಾರೆ.
ಆದರೆ ಐಶ್ವರ್ಯಾ ಅವರ ಇಡೀ ಲುಕ್‌ನಲ್ಲಿ ಹೆಚ್ಚು ಗಮನ ಸೆಳೆದಿದ್ದು ತಲೆಯ ಮೇಲಿದ್ದ ಡೈಮಂಡ್ ಕ್ರೌನ್. ವಜ್ರದ ಕಿರೀಟದ ಜೊತೆಗೆ ಡೈಮಂಡ್ ರಿಂಗ್ಸ್ ಮತ್ತು ಪಂಪ್ಸ್ ಧರಿಸಿ ಐಶ್ವರ್ಯಾ ಥೇಟ್ ಮಹಾರಾಣಿಯಂತೆ ಮಿಂಚಿದ್ದಾರೆ.
ಇನ್ನು ಈ ಬಾರಿ ಐಶ್ವರ್ಯಾ ಹೇರ್‌ಸ್ಟೈಲ್‌ನಲ್ಲೂ ಹೊಸ ಪ್ರಯೋಗ ಮಾಡಿದ್ದಾರೆ. ಕೆಂಪು ಛಾಯೆಯ ಕೂದಲು, ಸೈಡ್ ಪಾರ್ಟಿಂಗ್, ಸಾಫ್ಟ್ ವೇವ್ಸ್ ಜೊತೆಗೆ ವಿಂಗ್ಡ್ ಐಲೈನರ್ ಮತ್ತು ಬೋಲ್ಡ್ ರೆಡ್ ಲಿಪ್‌ಸ್ಟಿಕ್ ಅವರ ರಾಯಲ್ ಲುಕ್‌ಗೆ ಮತ್ತಷ್ಟು ಮೆರುಗು ನೀಡಿದೆ.
ವಯೋಲಾ ಡೇವಿಸ್, ಕೆಂಡಾಲ್ ಜೆನ್ನರ್, ಕಾರಾ ಡೆಲಿವಿಂಗ್ನೆ, ಜೇನ್ ಫೋಂಡಾ, ಇವಾ ಲೊಂಗೋರಿಯಾ ಸೇರಿದಂತೆ ಹಲವು ಅಂತಾರಾಷ್ಟ್ರೀಯ ತಾರೆಯರೊಂದಿಗೆ ಐಶ್ವರ್ಯಾ ರನ್‌ವೇ ಹಂಚಿಕೊಂಡಿದ್ದಾರೆ.
ಒಟ್ಟಿನಲ್ಲಿ ಬ್ಲಾಕ್ ಗೌನ್, ಕ್ರಿಸ್ಟಲ್ ಕೇಪ್, ಕೆಂಪು ಕೂದಲು ಮತ್ತು ತಲೆ ಮೇಲಿನ ಡೈಮಂಡ್ ಕಿರೀಟದೊಂದಿಗೆ ಪ್ಯಾರಿಸ್ ಫ್ಯಾಷನ್ ವೀಕ್‌ನಲ್ಲಿ ಐಶ್ವರ್ಯಾ ರೈ ಮತ್ತೊಮ್ಮೆ ‘ರಾಯಲ್ ಐಶ್’ ಆಗಿ ಮಿಂಚಿದ್ದಾರೆ.



