HomeEntertainmentಆಟೋ ಚಾಲಕರ ಕಿರುಚಿತ್ರದಲ್ಲಿ ವಿಜಯ್ ರಾಘವೇಂದ್ರ: ‘ನಗು ನಗುತ’ ಕಿರುಚಿತ್ರ ರಿಲೀಸ್

ಆಟೋ ಚಾಲಕರ ಕಿರುಚಿತ್ರದಲ್ಲಿ ವಿಜಯ್ ರಾಘವೇಂದ್ರ: ‘ನಗು ನಗುತ’ ಕಿರುಚಿತ್ರ ರಿಲೀಸ್

For Dai;y Updates Join Our whatsapp Group

ಸಿನಿಮಾ ಹಾಗೂ ಕಿರುತೆರೆಯಲ್ಲಿ ತಮ್ಮದೇ ಛಾಪು ಮೂಡಿಸಿರುವ ಸ್ಯಾಂಡಲ್‌ವುಡ್ ನಟ ವಿಜಯ್ ರಾಘವೇಂದ್ರ ಇದೀಗ ಸಾಮಾಜಿಕ ಕಳಕಳಿಯ ಕಿರುಚಿತ್ರವೊಂದರಲ್ಲಿ ಅಭಿನಯಿಸಿದ್ದಾರೆ. ಆಟೋ ಚಾಲಕರ ಬದುಕು, ಅವರ ಆರೋಗ್ಯ ಹಾಗೂ ಕುಟುಂಬದ ಜವಾಬ್ದಾರಿಯನ್ನು ಕೇಂದ್ರವಾಗಿಟ್ಟುಕೊಂಡು ನಿರ್ಮಿಸಿರುವ ‘ನಗು ನಗುತ’ ಕಿರುಚಿತ್ರದಲ್ಲಿ ವಿಜಯ್ ರಾಘವೇಂದ್ರ ಆಟೋ ಚಾಲಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಹೃದಯದ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದೊಂದಿಗೆ ವಿಶೇಷ ದಿನದಂದು ಕಿರುಚಿತ್ರವನ್ನು ಆಟೋ ಚಾಲಕರ ಸಮ್ಮುಖದಲ್ಲಿ ಬಿಡುಗಡೆ ಮಾಡಲಾಗಿದೆ. ವಿಜಯ್ ರಾಘವೇಂದ್ರ ಅವರಿಗೆ ಜೋಡಿಯಾಗಿ ನಟಿ ವರ್ಷಿತಾ ರಾಮ್ ಅಭಿನಯಿಸಿದ್ದು, ಪತ್ನಿಯ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.

ಪ್ರತಿದಿನ ಬೆಳಗ್ಗೆಯಿಂದ ರಾತ್ರಿವರೆಗೆ ರಸ್ತೆಗಳಲ್ಲಿ ವಾಹನ ಓಡಿಸುವ ಚಾಲಕರು ಎದುರಿಸುವ ಸಮಸ್ಯೆಗಳು, ಅದರಲ್ಲೂ ಆಟೋ ಚಾಲಕರ ಬದುಕಿನ ಸವಾಲುಗಳನ್ನು ‘ನಗು ನಗುತ’ ಕಿರುಚಿತ್ರದಲ್ಲಿ ತೆರೆಗೆ ತರಲಾಗಿದೆ.

ಕುಟುಂಬದ ಜವಾಬ್ದಾರಿ ನಿಭಾಯಿಸುವ ಒತ್ತಡದಲ್ಲಿ ಸರಿಯಾದ ಸಮಯಕ್ಕೆ ಊಟ, ನಿದ್ದೆ ಮಾಡದೆ ದುಡಿಯುವ ಚಾಲಕರು ತಮ್ಮ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ ಎದುರಾಗಬಹುದಾದ ಪರಿಣಾಮಗಳ ಕುರಿತು ಕಥೆ ಬೆಳಕು ಚೆಲ್ಲುತ್ತದೆ.

ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಮಾಡದೆ, ಕುಟುಂಬದ ಜೊತೆಗೆ ತಮ್ಮ ದೇಹದ ಬಗ್ಗೆಯೂ ಕಾಳಜಿ ವಹಿಸಬೇಕು ಎಂಬ ಸಂದೇಶವನ್ನು ಕಿರುಚಿತ್ರದ ಮೂಲಕ ನೀಡಲಾಗಿದೆ. ಕಿರುಚಿತ್ರ ಬಿಡುಗಡೆ ಬಳಿಕ ಮಾತನಾಡಿದ ವಿಜಯ್ ರಾಘವೇಂದ್ರ, ಆಟೋ ಚಾಲಕರಿಂದ ಚಿತ್ರಕ್ಕೆ ಉತ್ತಮ ಪ್ರೋತ್ಸಾಹ ಸಿಕ್ಕಿದೆ ಎಂದು ಸಂತಸ ವ್ಯಕ್ತಪಡಿಸಿದರು.

“ಆಟೋ ಚಾಲಕರು ತಮ್ಮ ಆರೋಗ್ಯ ಹಾಗೂ ಕುಟುಂಬದ ಕಡೆ ಹೆಚ್ಚಿನ ಗಮನ ಹರಿಸಬೇಕು ಎಂಬ ಉದ್ದೇಶದಿಂದ ಈ ಕಿರುಚಿತ್ರ ಮಾಡಲಾಗಿದೆ. ಇತ್ತೀಚಿನ ದಿನಗಳಲ್ಲಿ ಹೃದಯಾಘಾತದ ಪ್ರಕರಣಗಳು ಹೆಚ್ಚುತ್ತಿರುವುದನ್ನು ನೋಡುತ್ತಿದ್ದೇವೆ. ಅದಕ್ಕೆ ಹಲವು ಕಾರಣಗಳಿರಬಹುದು. ಆದರೆ ನಮ್ಮ ಆರೋಗ್ಯದ ಬಗ್ಗೆ ನಾವು ಕಾಳಜಿ ವಹಿಸುವುದು ಬಹಳ ಮುಖ್ಯ. ನಮ್ಮ ಆರೋಗ್ಯ ನಮ್ಮ ಕೈಯಲ್ಲಿರಲಿ” ಎಂದು ವಿಜಯ್ ರಾಘವೇಂದ್ರ ಹೇಳಿದರು.

ನಾಯಕಿ ವರ್ಷಿತಾ ರಾಮ್ ಮಾತನಾಡಿ, “ಇದು ಕಿರುಚಿತ್ರವಾದರೂ ನನಗೆ ದೊಡ್ಡ ಸಿನಿಮಾದಲ್ಲಿ ಅಭಿನಯಿಸಿದಷ್ಟೇ ಖುಷಿಯಾಗಿದೆ. ನನ್ನ ಮೇಲೆ ನಂಬಿಕೆ ಇಟ್ಟು ಈ ಅವಕಾಶ ನೀಡಿದ ಇಡೀ ತಂಡಕ್ಕೆ ಧನ್ಯವಾದ” ಎಂದು ಸಂತಸ ಹಂಚಿಕೊಂಡರು.

‘ನಗು ನಗುತ’ ಕಿರುಚಿತ್ರವನ್ನು ಶಿವು ಜಮಖಂಡಿ ನಿರ್ದೇಶಿಸಿದ್ದು, ಸಂಗೀತ ಸಂಯೋಜನೆಯ ಜವಾಬ್ದಾರಿಯನ್ನೂ ಅವರೇ ನಿರ್ವಹಿಸಿದ್ದಾರೆ. “ಕಥೆ ತುಂಬಾ ಚೆನ್ನಾಗಿದ್ದ ಕಾರಣ ನಿರ್ದೇಶನ ಮಾಡಲು ಒಪ್ಪಿಕೊಂಡೆ. ನಿರ್ಮಾಪಕರು ಕಿರುಚಿತ್ರವನ್ನು ದೊಡ್ಡ ಮಟ್ಟದಲ್ಲಿ ನಿರ್ಮಿಸಬೇಕು ಎಂಬ ಕನಸು ಹೊಂದಿದ್ದರು. ಅದರಂತೆಯೇ ಚಿತ್ರವನ್ನು ಕಟ್ಟಿಕೊಡಲಾಗಿದೆ. ನೋಡುಗರ ಮೊಗದಲ್ಲಿ ನಗು ಮೂಡಿಸುವುದೇ ‘ನಗು ನಗುತ’ ಕಿರುಚಿತ್ರದ ಉದ್ದೇಶ” ಎಂದು ಶಿವು ಜಮಖಂಡಿ ತಿಳಿಸಿದ್ದಾರೆ.

ಕಿರುಚಿತ್ರಕ್ಕೆ ನಾಸಿರ್ ಖತೀಬ್ ಮತ್ತು ಮೊಹಮ್ಮದ್ ಸಲಾವುದ್ದೀನ್ ಬಂಡವಾಳ ಹೂಡಿದ್ದಾರೆ. ನಾಸಿರ್ ಖತೀಬ್ ನಿರ್ಮಾಣದ ಜೊತೆಗೆ ಕಥೆಯನ್ನೂ ಬರೆದಿದ್ದಾರೆ. ಸಾಮಾಜಿಕ ಕಳಕಳಿಯ ಕಥೆಯನ್ನು ತೆರೆಗೆ ತರಬೇಕು ಎಂಬುದು ತಮ್ಮ ಕನಸಾಗಿತ್ತು. ಕಥೆಯನ್ನು ವಿಜಯ್ ರಾಘವೇಂದ್ರ ಅವರಿಗೆ ವಿವರಿಸಿದಾಗ ಅವರು ಅಭಿನಯಿಸಲು ಒಪ್ಪಿಕೊಂಡಿದ್ದು ಸಂತಸ ತಂದಿದೆ. ಉತ್ತಮ ಉದ್ದೇಶದೊಂದಿಗೆ ಈ ಕಿರುಚಿತ್ರ ನಿರ್ಮಿಸಲಾಗಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ.

ಸಿನಿಮಾ ಹಾಗೂ ಕಿರುತೆರೆಯಲ್ಲಿ ಬ್ಯುಸಿಯಾಗಿರುವ ವಿಜಯ್ ರಾಘವೇಂದ್ರ, ಇದೀಗ ಆಟೋ ಚಾಲಕರ ಆರೋಗ್ಯ ಮತ್ತು ಕುಟುಂಬದ ಮಹತ್ವ ಸಾರುವ ಸಾಮಾಜಿಕ ಸಂದೇಶವುಳ್ಳ ‘ನಗು ನಗುತ’ ಕಿರುಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದಾರೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img