ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ (Renukaswamy Case) ಸಂಬಂಧಿಸಿದಂತೆ ಪ್ರಮುಖ ಆರೋಪಿ ಪ್ರದೋಷ್ (Pradosh) ಮಾಫಿ ಸಾಕ್ಷಿ (Pardon Witness) ಹೇಳಿಕೆ ದಾಖಲು ಮಾಡುವುದನ್ನು ಮುಂದೂಡುವಂತೆ ಕೋರಿ ನಟ ದರ್ಶನ್ (Darshan) ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣಾ ನ್ಯಾಯಾಲಯ (ಸಿಸಿಎಚ್) ವಜಾಗೊಳಿಸಿದೆ.
ಪ್ರದೋಷ್ ಮಾಫಿ ಸಾಕ್ಷಿ ಹೇಳಿಕೆ ತಡೆಯಲು ದರ್ಶನ್ ಪರ ವಕೀಲರು ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಹೈಕೋರ್ಟ್ ಆ ಅರ್ಜಿಯನ್ನು ವಜಾಗೊಳಿಸಿತ್ತು. ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ (Supreme Court) ಮೇಲ್ಮನವಿ ಸಲ್ಲಿಸಲು ಕನಿಷ್ಠ 10 ದಿನಗಳ ಸಮಯ ಬೇಕಿದೆ. ಹೀಗಾಗಿ ಪ್ರಾಸಿಕ್ಯೂಷನ್ ಇತರ ಸಾಕ್ಷಿಗಳ ಹೇಳಿಕೆ ದಾಖಲಿಸಲಿ, ಪ್ರದೋಷ್ ಹೇಳಿಕೆಯನ್ನು 7ನೇ ಸಾಕ್ಷಿಯಾಗಿ ತೆಗೆದುಕೊಳ್ಳಲಿ ಮತ್ತು ಪ್ರದೋಷ್ ಹೇಳಿಕೆ ದಾಖಲು ಪ್ರಕ್ರಿಯೆಯನ್ನು ಮುಂದೂಡಬೇಕು ಎಂದು ದರ್ಶನ್ ಪರ ವಕೀಲರು ಸೆಷನ್ಸ್ ಕೋರ್ಟ್‌ಗೆ ಮನವಿ ಮಾಡಿದ್ದರು.
ದರ್ಶನ್ ಅವರ ಈ ಮನವಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸರ್ಕಾರಿ ವಕೀಲ ಸಚಿನ್, “ಸೆಪ್ಟೆಂಬರ್ 24ರಂದೇ ಪ್ರದೋಷ್‌ಗೆ ಸಮನ್ಸ್ ನೀಡಲಾಗಿದೆ. ಹೈಕೋರ್ಟ್‌ನಲ್ಲಿ ಅರ್ಜಿ ವಿಚಾರಣೆ ಬಳಿಕವೇ ಸಮನ್ಸ್ ಜಾರಿ ಮಾಡಲಾಗಿದೆ. ದರ್ಶನ್ ಅವರ ಅರ್ಜಿಯಲ್ಲಿ ಯಾವುದೇ ಹೊಸ ಮಾಹಿತಿ ಅಥವಾ ಸಂಗತಿಗಳಿಲ್ಲ. ಹೀಗಾಗಿ ಈ ಅರ್ಜಿಯನ್ನು ಪುರಸ್ಕರಿಸಬಾರದು” ಎಂದು ವಾದಿಸಿದರು.
ಉಭಯ ಪಕ್ಷಗಳ ವಾದ ಆಲಿಸಿದ ನ್ಯಾಯಾಲಯವು ದರ್ಶನ್ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ್ದು, ನಿಗದಿಯಂತೆ ಪ್ರದೋಷ್ ಮಾಫಿ ಸಾಕ್ಷಿ ಹೇಳಿಕೆ ದಾಖಲಿಸುವ ಪ್ರಕ್ರಿಯೆಗೆ ಅಸ್ತು ಎಂದಿದೆ.



