ಬೆಂಗಳೂರು: ಬೆಂಗಳೂರು ನಗರದಲ್ಲಿ ದಿನೇ ದಿನೇ ಹೆಚ್ಚಾಗುತ್ತಿರುವ ಸಂಚಾರ ದಟ್ಟಣೆ ಸಮಸ್ಯೆಯನ್ನು ನಿಯಂತ್ರಿಸಲು ಹಾಗೂ ವಾಹನ ಸವಾರರಿಗೆ ಸುಗಮ ಸಂಚಾರ ಕಲ್ಪಿಸಲು ಬೆಂಗಳೂರು ಸಂಚಾರ ಪೊಲೀಸರು ತಂತ್ರಜ್ಞಾನದ ಬಳಕೆಗೆ ಹೆಚ್ಚಿನ ಒತ್ತು ನೀಡಿದ್ದಾರೆ. ಇದರ ಭಾಗವಾಗಿ ಇದೀಗ ನಗರದ ಪ್ರಮುಖ ಹಾಗೂ ಹೈ ಡೆನ್ಸಿಟಿ ಜಂಕ್ಷನ್‌ಗಳಲ್ಲಿ ಡ್ರೋನ್ (Drone) ಮೂಲಕ ಸಂಚಾರ ಪರಿಸ್ಥಿತಿಯ ಮೇಲ್ವಿಚಾರಣೆ ನಡೆಸಲಾಗುತ್ತಿದೆ.
ನಗರದ ಒಟ್ಟು 10 ಸಂಚಾರ ಉಪವಿಭಾಗಗಳಿಗೆ ತಲಾ ಒಂದರಂತೆ ಡ್ರೋನ್‌ಗಳನ್ನು ಹಂಚಿಕೆ ಮಾಡಲಾಗಿದೆ. ಬೆಳಿಗ್ಗೆ ಹಾಗೂ ಸಂಜೆಯ ಪೀಕ್ ಅವರ್‌ಗಳಲ್ಲಿ (Peak Hours) ಡ್ರೋನ್‌ಗಳ ಮೂಲಕ ಪ್ರಮುಖ ರಸ್ತೆಗಳು ಹಾಗೂ ಜಂಕ್ಷನ್‌ಗಳಲ್ಲಿನ ವಾಹನ ಸಂಚಾರದ ಮೇಲೆ ತೀವ್ರ ನಿಗಾ ವಹಿಸಲಾಗುತ್ತಿದೆ.
ವಿಶೇಷವಾಗಿ ಹೆಬ್ಬಾಳ, ಟೌನ್ ಹಾಲ್, ಸಿಲ್ಕ್ ಬೋರ್ಡ್ ಸೇರಿದಂತೆ ವಾಹನ ದಟ್ಟಣೆ ಹೆಚ್ಚಿರುವ ಪ್ರಮುಖ ವೃತ್ತಗಳಲ್ಲಿ ಸಂಚಾರ ನಿರ್ವಹಣೆಗೆ ಈ ಡ್ರೋನ್‌ಗಳು ಅತ್ಯಂತ ಸಹಕಾರಿಯಾಗುತ್ತಿವೆ. ಜೊತೆಗೆ, ವಿವಿಐಪಿಗಳ (VVIP) ಸಂಚಾರದ ಸಂದರ್ಭದಲ್ಲೂ ಡ್ರೋನ್‌ಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಜಂಟಿ ಪೊಲೀಸ್ ಆಯುಕ್ತ (ಸಂಚಾರ) ಕಾರ್ತಿಕ್ ರೆಡ್ಡಿ ತಿಳಿಸಿದ್ದಾರೆ.
ಡ್ರೋನ್ ಕಣ್ಗಾವಲಿನಿಂದಾಗಿ ಸಂಚಾರ ದಟ್ಟಣೆ ಉಂಟಾಗುವ ಸ್ಥಳಗಳನ್ನು ತಕ್ಷಣವೇ ಗುರುತಿಸಿ, ಶೀಘ್ರವಾಗಿ ಟ್ರಾಫಿಕ್ ನಿರ್ವಹಣೆ ಮಾಡಲು ಸಾಧ್ಯವಾಗಲಿದೆ ಎಂಬ ಆಶಯವನ್ನು ಸಾರ್ವಜನಿಕರು ವ್ಯಕ್ತಪಡಿಸಿದ್ದಾರೆ.



