HomeKarnataka Newsಕರಿದ ಎಣ್ಣೆ ಮತ್ತೆ ಬಳಸುವ ಮುನ್ನ ಹುಷಾರ್! ಮನೆ ಹಾಗೂ ಹೋಟೆಲ್ʼಗಳಲ್ಲಿ ಅಡುಗೆ ಎಣ್ಣೆ ಮರುಬಳಕೆಗೆ...

ಕರಿದ ಎಣ್ಣೆ ಮತ್ತೆ ಬಳಸುವ ಮುನ್ನ ಹುಷಾರ್! ಮನೆ ಹಾಗೂ ಹೋಟೆಲ್ʼಗಳಲ್ಲಿ ಅಡುಗೆ ಎಣ್ಣೆ ಮರುಬಳಕೆಗೆ ಹೊಸ ಗೈಡ್ʼಲೈನ್ಸ್!

For Dai;y Updates Join Our whatsapp Group

ಬೆಂಗಳೂರು: ಉಪ್ಪು ಮತ್ತು ಸಕ್ಕರೆ ಬಳಕೆಯ ಕುರಿತು ಮಾರ್ಗಸೂಚಿ ಹೊರಡಿಸಿದ್ದ ಆರೋಗ್ಯ ಇಲಾಖೆ ಇದೀಗ ಅಡುಗೆ ಎಣ್ಣೆಯ ಸುರಕ್ಷಿತ ಬಳಕೆ ಹಾಗೂ ಮರುಬಳಕೆಗೆ ಸಂಬಂಧಿಸಿದ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಪದೇ ಪದೇ ಬಳಸಿದ ಅಡುಗೆ ಎಣ್ಣೆಯಿಂದ ಆರೋಗ್ಯದ ಮೇಲೆ ಉಂಟಾಗಬಹುದಾದ ದುಷ್ಪರಿಣಾಮಗಳನ್ನು ತಡೆಯುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.

ಮನೆಗಳಲ್ಲಿ ಅಡುಗೆ ಎಣ್ಣೆ ಮರುಬಳಕೆ ಮಾಡುವ ವಿಧಾನದಿಂದ ಹಿಡಿದು ಹೋಟೆಲ್, ರೆಸ್ಟೋರೆಂಟ್, ಸಣ್ಣ ಹಾಗೂ ದೊಡ್ಡ ಆಹಾರ ಉತ್ಪಾದನಾ ಘಟಕಗಳು ಬಳಸಿದ ಎಣ್ಣೆಯನ್ನು ಹೇಗೆ ನಿರ್ವಹಿಸಬೇಕು ಮತ್ತು ವಿಲೇವಾರಿ ಮಾಡಬೇಕು ಎಂಬುದರ ಕುರಿತು ಪ್ರತ್ಯೇಕ ಸೂಚನೆಗಳನ್ನು ನೀಡಲಾಗಿದೆ.

ಮನೆಯಲ್ಲಿ ಬಳಸಿದ ಎಣ್ಣೆಯನ್ನು ಮತ್ತೆ ಕರಿಯಲು ಬಳಸಬೇಡಿ

ಮನೆಯಲ್ಲಿ ಆಹಾರ ಕರಿಯಲು ಬಳಸಿದ ಎಣ್ಣೆಯನ್ನು ಫಿಲ್ಟರ್ ಮಾಡಿ ಬಳಿಕ ಕರ್ರಿ ಅಥವಾ ಇತರ ಅಡುಗೆಗೆ ಬಳಸಬಹುದು. ಆದರೆ ಅದೇ ಎಣ್ಣೆಯನ್ನು ಮತ್ತೆ ಆಹಾರ ಕರಿಯಲು ಬಳಸುವುದನ್ನು ತಪ್ಪಿಸಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಎಣ್ಣೆಯಿಂದ ನೀಲಿ-ಬೂದು ಹೊಗೆ ಕಾಣಿಸಿಕೊಳ್ಳುವುದು, ಗಟ್ಟಿ ನೊರೆ ಬರುವುದು, ಎಣ್ಣೆ ಕಪ್ಪಾಗುವುದು, ಮಸುಕಾಗುವುದು ಅಥವಾ ಅದರ ಸ್ಥಿರತೆಯಲ್ಲಿ ಬದಲಾವಣೆ ಕಂಡುಬಂದರೆ ಅಂತಹ ಎಣ್ಣೆಯನ್ನು ಮರುಬಳಕೆ ಮಾಡಬಾರದು.

ಬಳಸಿದ ಎಣ್ಣೆಯನ್ನು ಒಂದು ಅಥವಾ ಎರಡು ದಿನಗಳೊಳಗೆ ಬಳಸಬೇಕು. ಹೆಚ್ಚು ದಿನಗಳ ಕಾಲ ಸಂಗ್ರಹಿಸಬಾರದು. ಜೊತೆಗೆ ಬಳಸಿದ ಎಣ್ಣೆಯನ್ನು ತಾಜಾ ಎಣ್ಣೆಯ ಪಾತ್ರೆಗೆ ಸುರಿಯದೆ ಪ್ರತ್ಯೇಕವಾಗಿ ಇಡಬೇಕು ಎಂದು ಸೂಚಿಸಲಾಗಿದೆ.

ಬಳಸಿದ ಎಣ್ಣೆಯನ್ನು ಚರಂಡಿಗೆ ಸುರಿಯಬೇಡಿ

ಸಣ್ಣ ಪ್ರಮಾಣದ ಬಳಸಿದ ಎಣ್ಣೆಯನ್ನು ವಿಲೇವಾರಿ ಮಾಡುವಾಗ ಅದನ್ನು ಮರಳು, ಮರದ ಪುಡಿ, ಪೇಪರ್ ಟವೆಲ್ ಅಥವಾ ಇತರ ಹೀರಿಕೊಳ್ಳುವ ತ್ಯಾಜ್ಯದೊಂದಿಗೆ ಬೆರೆಸಿ, ಚೆಲ್ಲದಂತೆ ಸುರಕ್ಷಿತವಾಗಿ ಕಸದ ಬುಟ್ಟಿಗೆ ಹಾಕುವಂತೆ ಸೂಚಿಸಲಾಗಿದೆ. ಬಳಸಿದ ಎಣ್ಣೆಯನ್ನು ನೇರವಾಗಿ ಚರಂಡಿ ಅಥವಾ ಒಳಚರಂಡಿಗೆ ಸುರಿಯುವುದನ್ನು ತಪ್ಪಿಸಬೇಕು.

ಹೋಟೆಲ್‌ಗಳಿಗೆ ಪ್ರಮುಖ ಸೂಚನೆ

ಸಣ್ಣ ಆಹಾರ ಉತ್ಪಾದನಾ ಘಟಕಗಳು ಒಂದೇ ಎಣ್ಣೆಯನ್ನು ಮೂರು ಬಾರಿಗಿಂತ ಹೆಚ್ಚು ಬಳಸಬಾರದು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ಸಾಧ್ಯವಾದಷ್ಟು ಒಮ್ಮೆ ಮಾತ್ರ ಬಳಸುವುದು ಉತ್ತಮ ಎಂದು ಸಲಹೆ ನೀಡಲಾಗಿದೆ.

ಆಹಾರದ ಕಣಗಳನ್ನು ತೆಗೆದುಹಾಕಲು ಎಣ್ಣೆಯನ್ನು ಆಗಾಗ ಫಿಲ್ಟರ್ ಮಾಡಬೇಕು. ನೀಲಿ-ಬೂದು ಹೊಗೆ, ಗಟ್ಟಿ ನೊರೆ, ಕಪ್ಪು ಅಥವಾ ಮಸುಕಾದ ಬಣ್ಣ ಹಾಗೂ ಸ್ಥಿರತೆಯಲ್ಲಿ ಬದಲಾವಣೆ ಕಂಡರೆ ಎಣ್ಣೆಯನ್ನು ತಕ್ಷಣ ಬಳಕೆಯಿಂದ ತೆಗೆದುಹಾಕಬೇಕು.

ಬಳಸಿದ ಅಡುಗೆ ಎಣ್ಣೆಯನ್ನು (UCO) ಚರಂಡಿಗೆ ಸುರಿಯದೆ ಅಧಿಕೃತ ಸಂಗ್ರಹ ಏಜೆನ್ಸಿಗಳಿಗೆ ನೀಡಬೇಕು. ಅದನ್ನು ಬಯೋಡೀಸೆಲ್ ಅಥವಾ ಅನುಮೋದಿತ ಕೈಗಾರಿಕಾ ಉದ್ದೇಶಗಳಿಗೆ ಬಳಸಲು ಅವಕಾಶವಿದೆ.

ಬಳಸಿದ ಎಣ್ಣೆಯನ್ನು ಬೆಂಕಿ, ಗ್ಯಾಸ್ ಸಿಲಿಂಡರ್ ಹಾಗೂ ಇತರ ಉಷ್ಣ ಮೂಲಗಳಿಂದ ದೂರವಿಡಬೇಕು. ಆಹಾರ ಉತ್ಪಾದನೆಗಾಗಿ ಬೇರೆಡೆಯಿಂದ ಬಳಸಿದ ಎಣ್ಣೆಯನ್ನು ಖರೀದಿಸುವುದನ್ನೂ ಆಹಾರ ಉದ್ಯಮಗಳು ತಪ್ಪಿಸಬೇಕು.

ದೊಡ್ಡ ಆಹಾರ ಘಟಕಗಳಿಗೆ ಮತ್ತಷ್ಟು ಕಠಿಣ ನಿಯಮ

ದೊಡ್ಡ ಆಹಾರ ಉತ್ಪಾದನಾ ಘಟಕಗಳಲ್ಲಿ ಅಡುಗೆ ಎಣ್ಣೆಯ Total Polar Compounds (TPC) ಪ್ರಮಾಣ 25% ಮೀರಿದರೆ, ಅಂತಹ ಎಣ್ಣೆಯನ್ನು ಆಹಾರ ತಯಾರಿಕೆಗೆ ಬಳಸಬಾರದು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ತ್ಯಜಿಸಬೇಕಾದ ಎಣ್ಣೆಯನ್ನು ಮೊದಲು ತಣ್ಣಗಾಗಿಸಿ ಪ್ರತ್ಯೇಕ ಹಾಗೂ ಸೂಕ್ತ ಪಾತ್ರೆಯಲ್ಲಿ ಸಂಗ್ರಹಿಸಬೇಕು. ಅಡ್ಡ ಮಾಲಿನ್ಯ ತಪ್ಪಿಸಲು ಪಾತ್ರೆಗೆ ಸ್ಪಷ್ಟ ಲೇಬಲ್ ಅಂಟಿಸಬೇಕು.

ಬಿಸಿ ಎಣ್ಣೆಯನ್ನು ಒಂದು ಪಾತ್ರೆಯಿಂದ ಮತ್ತೊಂದಕ್ಕೆ ವರ್ಗಾಯಿಸಬಾರದು. ಇದರಿಂದ ಎಣ್ಣೆ ಚೆಲ್ಲುವ ಹಾಗೂ ಸುಟ್ಟ ಗಾಯಗಳಾಗುವ ಅಪಾಯವಿರುತ್ತದೆ.

ಬಳಸಿದ ಅಡುಗೆ ಎಣ್ಣೆಯನ್ನು ಅಧಿಕೃತ ಸಂಗ್ರಹ ಏಜೆನ್ಸಿಗಳು ಒದಗಿಸುವ ಡ್ರಮ್‌ಗಳಿಗೆ ಸುರಕ್ಷಿತವಾಗಿ ವರ್ಗಾಯಿಸಿ, ಪರಿಸರ ಸ್ನೇಹಿ ರೀತಿಯಲ್ಲಿ ವಿಲೇವಾರಿ ಮಾಡಬೇಕು.

ಸಿಬ್ಬಂದಿಗೂ ತರಬೇತಿ ಕಡ್ಡಾಯ

ಆಹಾರ ಉದ್ಯಮಗಳು ಬಳಸಿದ ಅಡುಗೆ ಎಣ್ಣೆಯ ನಿರ್ವಹಣೆ ಹಾಗೂ ವಿಲೇವಾರಿಗೆ ಜವಾಬ್ದಾರರಾಗಿರುವ ಸಿಬ್ಬಂದಿಗೆ ಸೂಕ್ತ ತರಬೇತಿ ನೀಡಬೇಕು ಎಂದು ಮಾರ್ಗಸೂಚಿಯಲ್ಲಿ ಸೂಚಿಸಲಾಗಿದೆ.

ಒಟ್ಟಿನಲ್ಲಿ ‘ಒಂದೇ ಎಣ್ಣೆಯನ್ನು ಪದೇ ಪದೇ ಬಳಸಬೇಡಿ, ಗುಣಮಟ್ಟದಲ್ಲಿ ಬದಲಾವಣೆ ಕಂಡರೆ ತಕ್ಷಣ ಬಳಕೆ ನಿಲ್ಲಿಸಿ ಮತ್ತು ಬಳಸಿದ ಎಣ್ಣೆಯನ್ನು ಸುರಕ್ಷಿತವಾಗಿ ವಿಲೇವಾರಿ ಮಾಡಿ’ ಎಂಬುದಕ್ಕೆ ಹೊಸ ಮಾರ್ಗಸೂಚಿಯಲ್ಲಿ ಹೆಚ್ಚಿನ ಒತ್ತು ನೀಡಲಾಗಿದೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img