ಗದಗ: KRIDL AEE ಪರ್ವೇಜ್ ಧಾರವಾಡ ನಾಪತ್ತೆ ಪ್ರಕರಣಕ್ಕೆ 18 ದಿನಗಳು ಕಳೆದರೂ ಪತ್ತೆಯಾಗಿಲ್ಲ. ಆದರೆ ಪರ್ವೇಜ್ ಎಲ್ಲಿದ್ದಾರೆ ಎಂಬುದರ ಕುರಿತು ಗದಗ ಪೊಲೀಸರಿಗೆ ಮಹತ್ವದ ಸುಳಿವು ಸಿಕ್ಕಿದೆ.
ಪರ್ವೇಜ್ ಆಂಧ್ರಪ್ರದೇಶದ ವಿಜಯವಾಡದಿಂದ ಭೋಪಾಲ್ ಕಡೆಗೆ ಪ್ರಯಾಣಿಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ವಿಜಯವಾಡದಲ್ಲಿ ಅವರ ಮೊಬೈಲ್ ಲೊಕೇಷನ್ ಪತ್ತೆಯಾದ ಬಳಿಕ ಮೊಬೈಲ್ ಸಂಪರ್ಕ ಕಡಿತಗೊಂಡಿದೆ. ಮೊಬೈಲ್ ಆಫ್ ಮಾಡಿಕೊಂಡಿದ್ದರೂ ಪೊಲೀಸರು ಸಿಸಿ ಕ್ಯಾಮೆರಾಗಳ ಮೂಲಕ ಪರ್ವೇಜ್ ಪ್ರಯಾಣದ ಜಾಡು ಪತ್ತೆಹಚ್ಚಿದ್ದಾರೆ.

ವಿಜಯವಾಡದಿಂದ ಭೋಪಾಲ್‌ವರೆಗೆ ಸುಮಾರು 1200 ಕಿಲೋಮೀಟರ್‌ಗಳಷ್ಟು ದೂರದ ಮಾರ್ಗದಲ್ಲಿರುವ ಸಿಸಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಗದಗ ಪೊಲೀಸರು ಪರಿಶೀಲಿಸಿದ್ದಾರೆ. ಈ ವೇಳೆ ಭೋಪಾಲ್‌ನಲ್ಲಿ ಪರ್ವೇಜ್ ಸಂಚರಿಸುತ್ತಿರುವುದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ನಾಪತ್ತೆಯಾದ ಬಳಿಕ 18 ದಿನಗಳಿಂದಲೂ ಪರ್ವೇಜ್ ಮೊಬೈಲ್ ಆನ್ ಮಾಡಿಲ್ಲ. ಹೀಗಾಗಿ ಮೊಬೈಲ್ ಲೊಕೇಷನ್ ಮೂಲಕ ಅವರ ನಿಖರ ಸ್ಥಳ ಪತ್ತೆಹಚ್ಚುವುದು ಪೊಲೀಸರಿಗೆ ಸವಾಲಾಗಿದೆ. ಆದರೂ ಸಿಸಿ ಕ್ಯಾಮೆರಾ ದೃಶ್ಯಾವಳಿಗಳ ಆಧಾರದಲ್ಲಿ ಪರ್ವೇಜ್‌ನ ಚಲನವಲನವನ್ನು ಪೊಲೀಸರು ಬೆನ್ನತ್ತಿದ್ದಾರೆ.
ಭೋಪಾಲ್‌ನಲ್ಲಿ ಪರ್ವೇಜ್ ಇರುವ ಸುಳಿವು ಸಿಕ್ಕಿರುವ ಹಿನ್ನೆಲೆಯಲ್ಲಿ ಗದಗ ಪೊಲೀಸರ ತಂಡ ಶೋಧ ಕಾರ್ಯವನ್ನು ಮತ್ತಷ್ಟು ಚುರುಕುಗೊಳಿಸಿದೆ. ಪರ್ವೇಜ್‌ನ ಪ್ರತಿ ಚಲನವಲನದ ಮೇಲೂ ನಿಗಾ ಇರಿಸಲಾಗಿದ್ದು, ಅವರನ್ನು ಸುರಕ್ಷಿತವಾಗಿ ಪತ್ತೆಹಚ್ಚಲು ನಿರಂತರ ಕಾರ್ಯಾಚರಣೆ ಮುಂದುವರಿದಿದೆ.

