HomeEntertainmentರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮತ್ತೆ ಕೋರ್ಟ್ ಮೆಟ್ಟಿಲೇರಿದ ದರ್ಶನ್; ಎರಡು ಹೊಸ ಅರ್ಜಿ ಸಲ್ಲಿಕೆ

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮತ್ತೆ ಕೋರ್ಟ್ ಮೆಟ್ಟಿಲೇರಿದ ದರ್ಶನ್; ಎರಡು ಹೊಸ ಅರ್ಜಿ ಸಲ್ಲಿಕೆ

For Dai;y Updates Join Our whatsapp Group

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಹಾಗೂ ನಟ ದರ್ಶನ್ ಅವರು ಮತ್ತೆ ಎರಡು ಅರ್ಜಿಗಳನ್ನು ಸಲ್ಲಿಸಿದ್ದಾರೆ. ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಿರುವ ಪ್ರದೋಷ್ ಅವರ ಎಸ್ಕಾರ್ಟ್ ಮತ್ತು ಭೇಟಿಗೆ ಸಂಬಂಧಿಸಿದಂತೆ ಒಂದು ಅರ್ಜಿ ಹಾಗೂ ಮಾಫಿ ಸಾಕ್ಷಿಯ ವಿಚಾರಣೆಯ ಅನುಕ್ರಮಕ್ಕೆ ಸಂಬಂಧಿಸಿದಂತೆ ಮತ್ತೊಂದು ಅರ್ಜಿಯನ್ನು ದರ್ಶನ್ ಪರ ವಕೀಲರು ಸಲ್ಲಿಸಿದ್ದಾರೆ.

ಪ್ರದೋಷ್ ಅವರನ್ನು ಕೋರ್ಟ್‌ಗೆ ಕರೆತರುವಾಗ ಅವರೊಂದಿಗೆ ಇತರರು ಭೇಟಿ ಮಾಡುವುದಕ್ಕೆ ಅವಕಾಶ ನೀಡದಂತೆ ಹಾಗೂ ಭದ್ರತಾ ಸಿಬ್ಬಂದಿಗೆ ಅಗತ್ಯ ಸಲಹೆ ಮತ್ತು ಸೂಚನೆಗಳನ್ನು ನೀಡುವಂತೆ ದರ್ಶನ್ ಪರ ವಕೀಲರು ಸೆಷನ್ಸ್ ಕೋರ್ಟ್‌ಗೆ ಮನವಿ ಮಾಡಿದ್ದಾರೆ.

ಈ ಅರ್ಜಿಯ ವಿಚಾರಣೆ ನಡೆಸಿದ ಸೆಷನ್ಸ್ ಕೋರ್ಟ್‌ನಲ್ಲಿ ಪ್ರಾಸಿಕ್ಯೂಷನ್ ಪರ ವಿಶೇಷ ಸರ್ಕಾರಿ ಅಭಿಯೋಜಕರು (ಎಸ್‌ಪಿಪಿ) ಪ್ರತಿಕ್ರಿಯೆ ನೀಡಿದ್ದಾರೆ. ನ್ಯಾಯಾಲಯದ ಹಿಂದಿನ ಆದೇಶದಂತೆ ಕಾಮಾಕ್ಷಿಪಾಳ್ಯ ಪೊಲೀಸರು ಹಾಗೂ ಜೈಲು ಅಧಿಕಾರಿಗಳು ಸಿಎಆರ್ ಎಸ್ಕಾರ್ಟ್‌ನೊಂದಿಗೆ ಜೈಲಿನ ಬಸ್‌ನಲ್ಲಿ ಪ್ರದೋಷ್ ಅವರನ್ನು ನ್ಯಾಯಾಲಯಕ್ಕೆ ಕರೆತಂದಿದ್ದಾರೆ ಎಂದು ತಿಳಿಸಿದ್ದಾರೆ.

ಅಲ್ಲದೆ, ಬಾಡಿ ಕ್ಯಾಮೆರಾ ಧರಿಸಿದ ಜೈಲು ಸಿಬ್ಬಂದಿಯನ್ನೂ ನ್ಯಾಯಾಲಯಕ್ಕೆ ನಿಯೋಜಿಸಲಾಗಿತ್ತು. ಪ್ರದೋಷ್ ಅವರ ಸುರಕ್ಷತೆ ಹಾಗೂ ಭದ್ರತೆಯ ದೃಷ್ಟಿಯಿಂದ ಕಾಮಾಕ್ಷಿಪಾಳ್ಯ ಠಾಣೆಯ ಇನ್ಸ್‌ಪೆಕ್ಟರ್ ಪೈಲಟ್ ವಾಹನದಲ್ಲಿ ಭದ್ರತೆ ಒದಗಿಸಿದ್ದರು ಎಂದು ಎಸ್‌ಪಿಪಿ ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದಾರೆ.

ಪ್ರದೋಷ್ ಅವರ ಭದ್ರತೆ ಮತ್ತು ಸುರಕ್ಷತೆಗಾಗಿ ಅಗತ್ಯ ಆದೇಶಗಳನ್ನು ನೀಡುವಂತೆ ಎಸ್‌ಪಿಪಿ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ. ಅರ್ಜಿಯ ವಿಚಾರಣೆ ಪೂರ್ಣಗೊಳಿಸಿದ ಕೋರ್ಟ್, ಇದೀಗ ಆದೇಶವನ್ನು ಕಾಯ್ದಿರಿಸಿದೆ. ಈ ಕುರಿತು ಶನಿವಾರ ಆದೇಶ ಹೊರಬೀಳುವ ಸಾಧ್ಯತೆ ಇದೆ.

ಇದೇ ವೇಳೆ, ಮಾಫಿ ಸಾಕ್ಷಿ ಪ್ರದೋಷ್ ಅವರ ವಿಚಾರಣೆಯ ಅನುಕ್ರಮಕ್ಕೆ ಸಂಬಂಧಿಸಿದಂತೆ ದರ್ಶನ್ ಪರ ವಕೀಲರು ಸಲ್ಲಿಸಿರುವ ಮತ್ತೊಂದು ಅರ್ಜಿಯ ವಿಚಾರಣೆಯನ್ನೂ ಕೋರ್ಟ್ ನಡೆಸಿದೆ.

ಈ ಅರ್ಜಿಯಲ್ಲಿ ಭಾರತೀಯ ಸಾಕ್ಷ್ಯ ಅಧಿನಿಯಮದ ಸೆಕ್ಷನ್ 137 ಮತ್ತು 138ರ ಅಡಿಯಲ್ಲಿ ವಿಚಾರಣೆಯ ಕ್ರಮಕ್ಕೆ ಸಂಬಂಧಿಸಿದ ಅಂಶಗಳನ್ನು ಉಲ್ಲೇಖಿಸಲಾಗಿದೆ. ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಪ್ರಾಸಿಕ್ಯೂಷನ್ ಪರ ಎಸ್‌ಪಿಪಿ ಅವರು ಕಾಲಾವಕಾಶ ಕೋರಿದ್ದಾರೆ.

ಅಕ್ಟೋಬರ್ 3ರಂದು ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡುವಂತೆ ಎಸ್‌ಪಿಪಿ ಮನವಿ ಮಾಡಿದ್ದು, ನ್ಯಾಯಾಲಯವು ಅರ್ಜಿಯ ಮುಂದಿನ ವಿಚಾರಣೆಯನ್ನು ಅಕ್ಟೋಬರ್ 3ಕ್ಕೆ ಮುಂದೂಡಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ಮುಂದುವರಿದಿರುವ ನಡುವೆಯೇ ಮಾಫಿ ಸಾಕ್ಷಿ ಪ್ರದೋಷ್ ಅವರ ಭದ್ರತೆ ಹಾಗೂ ವಿಚಾರಣೆಯ ಕ್ರಮಕ್ಕೆ ಸಂಬಂಧಿಸಿದಂತೆ ದರ್ಶನ್ ಪರ ಸಲ್ಲಿಸಿರುವ ಈ ಎರಡು ಅರ್ಜಿಗಳು ಇದೀಗ ನ್ಯಾಯಾಲಯದ ಮುಂದಿವೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img