HomeKarnataka Newsಪತಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ಪ್ರೇಮಿಗಳು; ಮದುವೆಯಾಗಲು ಒಂದು ದಿನದ ಪೆರೋಲ್ ನೀಡಿದ ಹೈಕೋರ್ಟ್

ಪತಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ಪ್ರೇಮಿಗಳು; ಮದುವೆಯಾಗಲು ಒಂದು ದಿನದ ಪೆರೋಲ್ ನೀಡಿದ ಹೈಕೋರ್ಟ್

For Dai;y Updates Join Our whatsapp Group

ಬೆಂಗಳೂರು: ಮೊದಲ ಪತಿಯ ಹತ್ಯೆಗೆ ಸಂಚು ರೂಪಿಸಿ ಕೊಲೆ ಮಾಡಿದ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ ಬೆಳಗಾವಿ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿರುವ ಪ್ರೇಮಿಗಳಿಬ್ಬರಿಗೆ ಮದುವೆಯಾಗಲು ಒಂದು ದಿನದ ಪೆರೋಲ್ ನೀಡಲಾಗಿದೆ. ಕೇವಲ ನೈತಿಕತೆಯ ಆಧಾರದಲ್ಲಿ ಕಾನೂನುಬದ್ಧ ಹಕ್ಕನ್ನು ನಿರಾಕರಿಸಲಾಗುವುದಿಲ್ಲ ಎಂದು ಅಭಿಪ್ರಾಯಪಟ್ಟಿರುವ ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠ ಈ ಆದೇಶ ನೀಡಿದೆ.

ಕೊಲೆ ಪ್ರಕರಣದಲ್ಲಿ ಶಿಕ್ಷೆ ಅನುಭವಿಸುತ್ತಿರುವ ಶ್ರೀಧರ ತಳವಾರ ಮತ್ತು ಸಿದ್ದವ್ವ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಜೆ.ಎಸ್. ಕಮಲ್ ಅವರಿದ್ದ ಪೀಠ, ಮದುವೆಗಾಗಿ ಸೀಮಿತ ಅವಧಿಗೆ ಪೆರೋಲ್ ಮಂಜೂರು ಮಾಡಿದೆ.

ಪತಿಯ ಹತ್ಯೆಗೆ ಸಂಚು ರೂಪಿಸಿದ ಆರೋಪದಲ್ಲಿ ಶಿಕ್ಷೆಗೆ ಗುರಿಯಾಗಿರುವ ಇಬ್ಬರು ಇದೀಗ ಮದುವೆಯಾಗಲು ಪೆರೋಲ್ ಕೋರುತ್ತಿರುವುದು ನೈತಿಕ ಪ್ರಶ್ನೆಗಳನ್ನು ಹುಟ್ಟುಹಾಕಬಹುದು. ಆದರೆ, ಕಾನೂನಿನಲ್ಲಿ ಯಾವುದೇ ನಿಷೇಧವಿಲ್ಲದ ಸಂದರ್ಭದಲ್ಲಿ ಕೇವಲ ನೈತಿಕತೆಯ ಆಧಾರದಲ್ಲಿ ಕಾನೂನುಬದ್ಧ ಹಕ್ಕನ್ನು ನಿರಾಕರಿಸಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ಸುಪ್ರೀಂ ಕೋರ್ಟ್ ಸೇರಿದಂತೆ ವಿವಿಧ ಹೈಕೋರ್ಟ್‌ಗಳ ತೀರ್ಪುಗಳನ್ನು ಉಲ್ಲೇಖಿಸಿದ ನ್ಯಾಯಪೀಠ, ಕೈದಿಗಳು ತಮ್ಮ ಕುಟುಂಬ ಹಾಗೂ ಸಾಮಾಜಿಕ ಸಂಬಂಧಗಳನ್ನು ಮುಂದುವರಿಸಿಕೊಳ್ಳಲು ಪೆರೋಲ್ ನೀಡುವುದು ಅಪರಾಧಿಗಳ ಪುನರ್ವಸತಿ ಪ್ರಕ್ರಿಯೆಯ ಪ್ರಮುಖ ಭಾಗವಾಗಿದೆ ಎಂದು ತಿಳಿಸಿದೆ. ಇಂತಹ ಅವಕಾಶಗಳು ಕೈದಿಗಳ ಪುನರ್‌ವಸತಿಗೆ ಸಹಕಾರಿಯಾಗುತ್ತವೆ ಎಂದು ಪೀಠ ಅಭಿಪ್ರಾಯಪಟ್ಟಿದೆ.

ಅರ್ಜಿದಾರರು ವಿಚಾರಣಾ ಅವಧಿ ಸೇರಿದಂತೆ ಈಗಾಗಲೇ 3 ವರ್ಷ, 5 ತಿಂಗಳು ಮತ್ತು 25 ದಿನಗಳ ಜೈಲು ಶಿಕ್ಷೆಯನ್ನು ಅನುಭವಿಸಿದ್ದಾರೆ. ಜೈಲಿನಲ್ಲಿರುವ ಅವರ ನಡವಳಿಕೆಯ ಬಗ್ಗೆಯೂ ಯಾವುದೇ ಪ್ರತಿಕೂಲ ವರದಿಗಳಿಲ್ಲ ಎಂದು ನ್ಯಾಯಪೀಠ ಗಮನಿಸಿದೆ.

ಜೈಲಿನ ಆವರಣದಲ್ಲೇ ಮದುವೆ ನಡೆಸಲು ನಿಯಮಗಳ ಪ್ರಕಾರ ಅವಕಾಶವಿಲ್ಲ ಎಂಬ ಸರ್ಕಾರಿ ವಕೀಲರ ವಾದವನ್ನೂ ಪರಿಗಣಿಸಿದ ನ್ಯಾಯಪೀಠ, ಮದುವೆಗಾಗಿ ಒಂದು ದಿನಕ್ಕೆ ಸೀಮಿತವಾಗಿ ಪೆರೋಲ್ ನೀಡಿದೆ.

ನ್ಯಾಯಾಲಯದ ಆದೇಶದಂತೆ, ಮದುವೆ ನಿಗದಿಯಾಗಿರುವ ದಿನದಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮಾತ್ರ ಇಬ್ಬರಿಗೂ ಪೆರೋಲ್ ಇರಲಿದೆ. ಮದುವೆ ಸಮಾರಂಭದ ವೇಳೆ ಜೈಲರ್ ನಿಯೋಜಿಸುವ ಸೂಕ್ತ ಪೊಲೀಸ್ ಸಿಬ್ಬಂದಿ ಭದ್ರತೆ ಒದಗಿಸಬೇಕು. ಸಂಜೆ 5 ಗಂಟೆಯೊಳಗೆ ಇಬ್ಬರೂ ಬೆಳಗಾವಿ ಕಾರಾಗೃಹಕ್ಕೆ ಮರಳಬೇಕು ಎಂದು ನ್ಯಾಯಪೀಠ ಸೂಚಿಸಿದೆ.ಅಲ್ಲದೆ, ನ್ಯಾಯಾಲಯದ ಆದೇಶದ ಪ್ರತಿ ದೊರೆತ ಒಂದು ವಾರದೊಳಗೆ ಜೈಲು ಅಧಿಕಾರಿಗಳು ಈ ಕುರಿತು ಅಗತ್ಯ ಆದೇಶ ಹೊರಡಿಸಬೇಕು ಎಂದು ಪೀಠ ನಿರ್ದೇಶಿಸಿದೆ.

ಪ್ರಕರಣದ ಹಿನ್ನೆಲೆ

ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ವಡೇರಹಟ್ಟಿ ಗ್ರಾಮದಲ್ಲಿ 2023ರ ಜುಲೈ 17ರಂದು ಭೀಮನ ಅಮಾವಾಸ್ಯೆ ಸಂದರ್ಭದಲ್ಲಿ ಶಂಕರ್ ಸಿದ್ದಪ್ಪ ಜಗಮುತ್ತಿ (25) ಕೊಲೆಯಾಗಿದ್ದರು. ಪತ್ನಿ ಸಿದ್ದವ್ವ (ಪ್ರಿಯಾಂಕಾ) ಅವರೊಂದಿಗೆ ವಡೇರಹಟ್ಟಿ ಗ್ರಾಮದ ಬನಸಿದ್ದೇಶ್ವರ ದೇವಸ್ಥಾನಕ್ಕೆ ತೆರಳಿದ್ದ ವೇಳೆ ಈ ಘಟನೆ ನಡೆದಿತ್ತು.

ದೇವರ ದರ್ಶನ ಪಡೆದು ವಾಪಸ್ ಬರುತ್ತಿದ್ದ ಸಂದರ್ಭದಲ್ಲಿ ದೇವಸ್ಥಾನದ ಆವರಣದಲ್ಲೇ ಸಿದ್ದವ್ವ ಅವರ ಪ್ರಿಯತಮ ಭೈರನಟ್ಟಿ ಗ್ರಾಮದ ಶ್ರೀಧರ ತಳವಾರ (22), ಶಂಕರ್ ಮೇಲೆ ಚಾಕುವಿನಿಂದ ದಾಳಿ ನಡೆಸಿ ಕೊಲೆ ಮಾಡಿ ಪರಾರಿಯಾಗಿದ್ದ ಎಂದು ಪ್ರಕರಣದ ತನಿಖೆಯಲ್ಲಿ ತಿಳಿದುಬಂದಿತ್ತು.

ಘಟನೆಗೆ ಸಂಬಂಧಿಸಿದಂತೆ ಮೂಡಲಗಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೊದಲಿಗೆ ಶ್ರೀಧರ ತಳವಾರನನ್ನು ಬಂಧಿಸಿದ್ದರು. ವಿಚಾರಣೆ ವೇಳೆ ಶಂಕರ್ ಅವರ ಪತ್ನಿ ಸಿದ್ದವ್ವ ಜೊತೆ ಸೇರಿ ಕೊಲೆಗೆ ಸಂಚು ರೂಪಿಸಿರುವುದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಆಕೆಯನ್ನೂ ಬಂಧಿಸಲಾಗಿತ್ತು.

ತನಿಖಾಧಿಕಾರಿ ಸಿಪಿಐ ಶ್ರೀಶೈಲ್ ಬ್ಯಾಕೂಡ ಅವರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ 12ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ತಾರಕೇಶ್ವರಗೌಡ ಪಾಟೀಲ ಅವರು ಸಾಕ್ಷ್ಯಾಧಾರಗಳನ್ನು ಪರಿಗಣಿಸಿ, 2024ರ ಜುಲೈ 30ರಂದು ಇಬ್ಬರು ಆರೋಪಿಗಳಿಗೆ ಕಠಿಣ ಜೀವಾವಧಿ ಶಿಕ್ಷೆ ಹಾಗೂ ತಲಾ ₹3 ಲಕ್ಷ ದಂಡ ವಿಧಿಸಿ ತೀರ್ಪು ನೀಡಿದ್ದರು. ದಂಡದ ಮೊತ್ತದಲ್ಲಿ ₹2.50 ಲಕ್ಷವನ್ನು ಮೃತ ಶಂಕರ್ ಅವರ ಕುಟುಂಬಕ್ಕೆ ಪರಿಹಾರವಾಗಿ ನೀಡುವಂತೆ ನ್ಯಾಯಾಲಯ ಸೂಚಿಸಿತ್ತು. ಪ್ರಸ್ತುತ ಇಬ್ಬರೂ ಬೆಳಗಾವಿ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ.

90 ದಿನಗಳ ಪೆರೋಲ್‌ಗೆ ಅರ್ಜಿ

ಜೈಲಿನಲ್ಲಿರುವ ಶ್ರೀಧರ ತಳವಾರ ಮತ್ತು ಸಿದ್ದವ್ವ ತಾವಿಬ್ಬರೂ ಮದುವೆಯಾಗಲು ನಿರ್ಧರಿಸಿದ್ದು, ಮದುವೆಗಾಗಿ 90 ದಿನಗಳ ಪೆರೋಲ್ ನೀಡುವಂತೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠ, 90 ದಿನಗಳ ಬದಲಿಗೆ ಮದುವೆಯ ದಿನದಂದು ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಮಾತ್ರ ಸೀಮಿತ ಪೆರೋಲ್ ಮಂಜೂರು ಮಾಡಿದೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img