ಮಂತ್ರಾಲಯ: ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಸೆಪ್ಟೆಂಬರ್ ತಿಂಗಳ ಹುಂಡಿ ಎಣಿಕೆ ಕಾರ್ಯ ಪೂರ್ಣಗೊಂಡಿದ್ದು, 22 ದಿನಗಳ ಅವಧಿಯಲ್ಲಿ ಬರೋಬ್ಬರಿ ₹3 ಕೋಟಿ 4 ಲಕ್ಷ 37,906 ಕಾಣಿಕೆ ಸಂಗ್ರಹವಾಗಿದೆ.
ಪ್ರತಿ ತಿಂಗಳಿನಂತೆ ಸೆಪ್ಟೆಂಬರ್‌ನಲ್ಲೂ ಮಂತ್ರಾಲಯಕ್ಕೆ ಭಕ್ತರ ದಂಡೇ ಹರಿದುಬಂದಿತ್ತು. ರಾಯರ ದರ್ಶನ ಪಡೆದ ಭಕ್ತರು ಹುಂಡಿಗೆ ಭಕ್ತಿಯಿಂದ ಕಾಣಿಕೆ ಸಮರ್ಪಿಸಿದ್ದು, ಎಣಿಕೆ ಬಳಿಕ ಭಾರೀ ಮೊತ್ತದ ಕಾಣಿಕೆ ಸಂಗ್ರಹವಾಗಿರುವುದು ಬೆಳಕಿಗೆ ಬಂದಿದೆ.
ಒಟ್ಟು ಸಂಗ್ರಹವಾದ ಕಾಣಿಕೆಯಲ್ಲಿ ₹2 ಕೋಟಿ 96 ಲಕ್ಷ 7,906 ನಗದು ರೂಪದಲ್ಲಿದೆ. ಇದರ ಜೊತೆಗೆ ₹8 ಲಕ್ಷ 30 ಸಾವಿರ ಮೌಲ್ಯದ ನಾಣ್ಯಗಳು ಹುಂಡಿಯಲ್ಲಿ ಸಂಗ್ರಹವಾಗಿವೆ. ಭಕ್ತರು ಕಾಣಿಕೆ ರೂಪದಲ್ಲಿ 48 ಗ್ರಾಂ ಚಿನ್ನ ಹಾಗೂ 285 ಗ್ರಾಂ ಬೆಳ್ಳಿಯನ್ನೂ ಸಮರ್ಪಿಸಿದ್ದಾರೆ.
ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಬಿಗಿ ಭದ್ರತೆಯ ನಡುವೆ ಹುಂಡಿ ಎಣಿಕೆ ಕಾರ್ಯ ನಡೆಸಲಾಯಿತು. ಮಠದ ನೂರಾರು ಸಿಬ್ಬಂದಿ, ಭಜನಾ ಮಂಡಳಿಯ ಸದಸ್ಯರು ಹಾಗೂ ಕರಸೇವಕರು ಎಣಿಕೆ ಕಾರ್ಯದಲ್ಲಿ ಭಾಗವಹಿಸಿದ್ದರು.
ಮುಜರಾಯಿ ಇಲಾಖೆ ಅಧಿಕಾರಿಗಳು ಹಾಗೂ ಶ್ರೀಮಠದ ಅಧಿಕಾರಿಗಳು ಹುಂಡಿ ಎಣಿಕೆ ಸಂದರ್ಭದಲ್ಲಿ ಸ್ಥಳದಲ್ಲೇ ಹಾಜರಿದ್ದು, ಸಂಪೂರ್ಣ ಪ್ರಕ್ರಿಯೆಯನ್ನು ಮೇಲ್ವಿಚಾರಣೆ ಮಾಡಿದರು. ಎಣಿಕೆ ಕಾರ್ಯದ ಬಳಿಕ ಸೆಪ್ಟೆಂಬರ್ ತಿಂಗಳಿನಲ್ಲಿ ರಾಯರ ಮಠಕ್ಕೆ ಭಕ್ತರಿಂದ ₹3 ಕೋಟಿಗೂ ಅಧಿಕ ಕಾಣಿಕೆ ಹರಿದು ಬಂದಿರುವುದಾಗಿ ತಿಳಿದು ಬಂದಿದೆ.



