ಗದಗ: ಜಿಲ್ಲೆಯ ನರಗುಂದ ತಾಲೂಕಿನ ಶಿರೋಳ ಗ್ರಾಮದಲ್ಲಿರುವ ಬೆಂಗಳೂರು ಬೇಕರಿ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ಬೂಸ್ಟ್ ಪೌಡರ್ ತುಂಬಿದ ಕೇಕ್ ಅನ್ನು ಮಾರಾಟ ಮಾಡಲಾಗುತ್ತಿದೆ ಎಂಬ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಗ್ರಾಹಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇರುವ ಆಹಾರ ಪದಾರ್ಥಗಳನ್ನು ಈ ರೀತಿಯಾಗಿ ಮಾರಾಟ ಮಾಡುತ್ತಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಆಹಾರ ಸುರಕ್ಷತಾ ನಿಯಮಗಳ ಉಲ್ಲಂಘನೆ ಆಗಿದೆಯೇ ಎಂಬ ಪ್ರಶ್ನೆ ಕೂಡ ಉದ್ಭವಿಸಿದೆ.
ಘಟನೆ ಬೆಳಕಿಗೆ ಬಂದಿದ್ದರೂ ನರಗುಂದ ತಾಲೂಕಿನ ಫುಡ್ ಇಲಾಖೆ ಅಧಿಕಾರಿಗಳು ಇನ್ನೂ ಯಾವುದೇ ಸ್ಪಷ್ಟ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಕೇಳಿಬಂದಿದೆ. ಇದು ಸಾರ್ವಜನಿಕರಲ್ಲಿ ಅನುಮಾನ ಹುಟ್ಟಿಸಿದೆ.
ಆಹಾರ ಸುರಕ್ಷತೆ ಎಂಬುದು ಜನಜೀವನಕ್ಕೆ ಸಂಬಂಧಿಸಿದ ಗಂಭೀರ ವಿಷಯ. ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಸ್ಥಳ ಪರಿಶೀಲನೆ ನಡೆಸಿ, ಮಾದರಿಗಳನ್ನು ಪರೀಕ್ಷಿಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.



