ಬಳ್ಳಾರಿ: ರೈತರಿಗೆ ಸಬ್ಸಿಡಿ ದರದಲ್ಲಿ ಸಿಗಬೇಕಿದ್ದ ಯೂರಿಯಾ ಗೊಬ್ಬರವನ್ನು ಅಕ್ರಮವಾಗಿ ಸಂಗ್ರಹಿಸಿ, ಚೀಲ ಬದಲಾಯಿಸಿ ಅನ್ಯ ರಾಜ್ಯಗಳಿಗೆ ಮಾರಾಟ ಮಾಡುತ್ತಿದ್ದ ದಂಧೆ ಬಳ್ಳಾರಿಯಲ್ಲಿ ಬಯಲಾಗಿದೆ. ಇಂಡಸ್ಟ್ರೀಸ್ ಏರಿಯಾದ ಗೋಡೌನ್‌ನಲ್ಲಿ 3,575 ಚೀಲ ಯೂರಿಯಾ ಜಪ್ತಿ ಮಾಡಲಾಗಿದೆ.
ಕೇಂದ್ರ ಸರ್ಕಾರದಿಂದ ರೈತರಿಗೆ ನೀಡುವ ಯೂರಿಯಾವನ್ನು ಮಾರುಕಟ್ಟೆಯಿಂದ ವಿಲೇವಾರಿ ಮಾಡಿ, ಕೃತಕ ಅಭಾವ ಸೃಷ್ಟಿಸಿ ಹೆಚ್ಚಿನ ದರಕ್ಕೆ ಮಾರಾಟ ಮಾಡಲಾಗುತ್ತಿತ್ತು. ಟೆಕ್ನಿಕಲ್ ಗ್ರೇಡ್ ಯೂರಿಯಾ ಎಂದು ಲೇಬಲ್ ಬದಲಾಯಿಸಿ ಕಾರ್ಖಾನೆಗಳಿಗೆ ಪೂರೈಕೆ ಮಾಡಲಾಗುತ್ತಿತ್ತು.
ಈ ಪ್ರಕರಣದಲ್ಲಿ ಕೇರಳ ಮೂಲದ ವಿಪಿನ್ ಅಲಿಯಾಸ್ ಕಾರ್ತಿಕ್ ಸಿಂಗ್ ಸೇರಿದಂತೆ ಏಳು ಮಂದಿ ಬಂಧಿತರಾಗಿದ್ದಾರೆ. ಬಂಧಿತರಲ್ಲಿ ಇಬ್ಬರು ಗೊಬ್ಬರ ವ್ಯಾಪಾರಿಗಳಿದ್ದಾರೆ.
ಮುಂಗಾರು ಮತ್ತು ಹಿಂಗಾರು ಬಿತ್ತನೆ ಸಮಯದಲ್ಲಿ ರೈತರು ಗೊಬ್ಬರದ ಕೊರತೆಯಿಂದ ಪರದಾಡಿದ್ದ ಹಿನ್ನೆಲೆ ಈ ಅಕ್ರಮ ಜಾಲ ಗಂಭೀರತೆ ಹೆಚ್ಚಿಸಿದೆ. ಕೃಷಿ ಇಲಾಖೆ ಅಧಿಕಾರಿಗಳ ಪಾತ್ರದ ಕುರಿತೂ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.



