ಬಳ್ಳಾರಿ: ಬಳ್ಳಾರಿ ನಗರದ ಪಿಜಿ ಕೊಠಡಿಯಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ತೀವ್ರ ಅನುಮಾನಕ್ಕೆ ಕಾರಣವಾಗಿದೆ.
ಮೃತನನ್ನು ಸಿರಗುಪ್ಪ ತಾಲೂಕಿನ ಟಿ.ರಾಂಪುರ ಗ್ರಾಮದ ನಿವಾಸಿ ವಿಶ್ವನಾಥ್ (24) ಎಂದು ಗುರುತಿಸಲಾಗಿದೆ. ಆತ ಬಳ್ಳಾರಿಯ ಕಾಲೇಜಿನಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದು, ಅಶೋಕ್ ನಗರದ ಪಿಜಿಯಲ್ಲಿ ವಾಸಿಸುತ್ತಿದ್ದನು.
ಸ್ಥಳೀಯ ಮಾಹಿತಿಯ ಪ್ರಕಾರ, ಸೋಮವಾರ ವಿಶ್ವನಾಥ್ ಹಾಗೂ ಪಿಜಿಯ ಸಹಪಾಠಿಗಳ ನಡುವೆ ಜಗಳ ನಡೆದಿತ್ತು. ಅದರ ನಂತರ ಮಂಗಳವಾರ ಕೊಠಡಿಯಲ್ಲಿ ಶವ ಪತ್ತೆಯಾಗಿದೆ.
ಆದರೆ ಮೃತದೇಹದ ತಲೆ ಮತ್ತು ಎದೆ ಭಾಗದಲ್ಲಿ ಗಾಯಗಳಿರುವುದು ಕಂಡುಬಂದಿರುವುದರಿಂದ ಪ್ರಕರಣವನ್ನು ಸಾಮಾನ್ಯ ಆತ್ಮಹತ್ಯೆ ಎಂದು ಪರಿಗಣಿಸುವುದಕ್ಕೆ ಸಾಧ್ಯವಿಲ್ಲ ಎಂದು ಕುಟುಂಬಸ್ಥರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಘಟನೆಯ ನಂತರ ಕೌಲ್ ಬಜಾರ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಸಾವಿನ ನಿಖರ ಕಾರಣ ಪತ್ತೆಹಚ್ಚಲು ತನಿಖೆ ಮುಂದುವರಿಸಿದ್ದಾರೆ.



