ಬೆಂಗಳೂರು: ಬಹುಚರ್ಚಿತ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಐವರು ಆರೋಪಿಗಳ ಭವಿಷ್ಯ ಇಂದು ನಿರ್ಧಾರವಾಗಲಿದೆ. ಆರೋಪಿಗಳ ಜಾಮೀನು ರದ್ದುಪಡಿಸುವಂತೆ ಪ್ರಾಸಿಕ್ಯೂಷನ್ ಸಲ್ಲಿಸಿರುವ ಅರ್ಜಿಯ ಕುರಿತು ಕರ್ನಾಟಕ ಹೈಕೋರ್ಟ್ ಇಂದು ಮಧ್ಯಾಹ್ನ 2.30ಕ್ಕೆ ಆದೇಶ ಪ್ರಕಟಿಸಲಿದೆ.
ಈ ಪ್ರಕರಣದಲ್ಲಿ ಈಗಾಗಲೇ ನಟ ದರ್ಶನ್ ಸೇರಿದಂತೆ ಏಳು ಆರೋಪಿಗಳ ಜಾಮೀನು ರದ್ದುಪಡಿಸಿರುವ ಸುಪ್ರೀಂ ಕೋರ್ಟ್, ಅವರನ್ನು ಮತ್ತೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಂತೆ ಆದೇಶ ನೀಡಿತ್ತು. ಇದರ ಬೆನ್ನಲ್ಲೇ ಉಳಿದ ಐವರು ಆರೋಪಿಗಳ ಜಾಮೀನನ್ನೂ ರದ್ದುಪಡಿಸಬೇಕು ಎಂದು ಪ್ರಾಸಿಕ್ಯೂಷನ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.
ವಿನಯ್, ನಂದೀಶ್, ಧನರಾಜು, ಪವನ್ ಹಾಗೂ ರಾಘವೇಂದ್ರ ವಿರುದ್ಧ ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ನ್ಯಾಯಮೂರ್ತಿ ಎಸ್. ರಾಚಯ್ಯ ಅವರ ಪೀಠ ನಡೆಸಿದೆ. ಸುಪ್ರೀಂ ಕೋರ್ಟ್ ಆದೇಶದ ಅನ್ವಯ ಉಳಿದ ಆರೋಪಿಗಳಿಗೂ ಅದೇ ಮಾನದಂಡ ಅನ್ವಯಿಸಬೇಕು ಎಂದು ಪ್ರಾಸಿಕ್ಯೂಷನ್ ವಾದ ಮಂಡಿಸಿತ್ತು.
ದರ್ಶನ್ ಹಾಗೂ ಇತರ ಆರೋಪಿಗಳು ಜೈಲು ಸೇರಿದ ಬಳಿಕವೇ ಪ್ರಾಸಿಕ್ಯೂಷನ್ ಈ ಅರ್ಜಿಯನ್ನು ಸಲ್ಲಿಸಿತ್ತು. ಪ್ರಕರಣದ ಎಲ್ಲಾ ಅಂಶಗಳನ್ನು ಪರಿಶೀಲಿಸಿ, ಎರಡೂ ಕಡೆಯ ವಾದ-ಪ್ರತಿವಾದಗಳನ್ನು ಸುದೀರ್ಘವಾಗಿ ಆಲಿಸಿರುವ ಹೈಕೋರ್ಟ್ ಇಂದು ಮಧ್ಯಾಹ್ನ 2.30ಕ್ಕೆ ತನ್ನ ಆದೇಶ ಪ್ರಕಟಿಸಲಿದೆ.
ಸದ್ಯ ಪ್ರಕರಣದ ವಿಚಾರಣೆ 59ನೇ ಸಿಸಿಎಚ್ ನ್ಯಾಯಾಲಯದಲ್ಲಿ ನಡೆಯುತ್ತಿದ್ದು, ಹೈಕೋರ್ಟ್‌ನ ತೀರ್ಪು ಪ್ರಕರಣದ ಮುಂದಿನ ಹಂತದ ಮೇಲೆ ಮಹತ್ವದ ಪರಿಣಾಮ ಬೀರುವ ಸಾಧ್ಯತೆ ಇದೆ.



