ದಾವಣಗೆರೆ: ಪತಿಯೊಂದಿಗೆ ಉಂಟಾದ ಜಗಳದ ಬಳಿಕ ತವರಿಗೆ ತೆರಳುತ್ತಿದ್ದ 41 ವರ್ಷದ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಬಸವಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.
ಮಾಹಿತಿಯ ಪ್ರಕಾರ, ಜೂನ್ 3ರಂದು ಘಟನೆ ನಡೆದಿದ್ದು, ಮಹಿಳೆ ನಂತರ ತಡವಾಗಿ ಬಸವಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮಹಿಳೆ ಪ್ರಯಾಣಿಸುತ್ತಿದ್ದ ವೇಳೆ ಹಂದಿ ಬೇಟೆಗೆ ತೆರಳಿದ್ದ ಆರೋಪಿಗಳ ಗುಂಪು ಆಕೆಯನ್ನು ಸಂಪರ್ಕಿಸಿ ಕುಡಿಯಲು ಕೂಲ್‌ಡ್ರಿಂಕ್ಸ್ ನೀಡಿದ ನಂತರ ತೋಟ ಪ್ರದೇಶಕ್ಕೆ ಕರೆದೊಯ್ದು ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.
ಘಟನೆ ಬಳಿಕ ಆರೋಪಿಗಳು ಮಹಿಳೆಯ ಖಾಸಗಿ ದೃಶ್ಯಗಳನ್ನು ದಾಖಲಿಸಿದ್ದು, ನಂತರ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ ಎನ್ನಲಾಗಿದೆ. ನಂತರ ಪ್ರಕರಣ ಗಂಭೀರವಾಗುತ್ತಿದ್ದಂತೆ ಆ ವಿಡಿಯೋಗಳನ್ನು ಡಿಲೀಟ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ದೂರು ದಾಖಲಾದ ಬೆನ್ನಲ್ಲೇ ಪೊಲೀಸರು 10 ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರು ಯಲೋದಹಳ್ಳಿ ಗ್ರಾಮದ ನಿವಾಸಿಗಳು ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ.



