ಅಸಂಘಟಿತ ಕಾರ್ಮಿಕರಿಗೆ ಅವರ ಜೀವನ ಸಂಧ್ಯಾಕಾಲದಲ್ಲಿ ದುಡಿದು ತಮ್ಮನ್ನು ಪೋಷಿಸಿಕೊಳ್ಳಲು ಆರ್ಥಿಕ ಮೂಲಗಳು ಇರುವುದಿಲ್ಲ. ಇಂತಹ ಅಸಂಘಟಿತ ವಲಯದ ಕಾರ್ಮಿಕರಿಗೆ ಅವರ ವೃದ್ಧಾಪ್ಯದ ವೇಳೆಯಲ್ಲಿ ಸಾಮಾಜಿಕ ಭದ್ರತೆ ಕಲ್ಪಿಸಲು ಭಾರತ ಸರ್ಕಾರವು ಪ್ರಧಾನಮಂತ್ರಿ ಶ್ರಮಯೋಗಿ ಮಾನ್ ಧನ್ (ಪಿಎಂ-ಎಸ್‌ವೈಎಂ)ಎಂಬ ಮಹತ್ವಾಕಾಂಕ್ಷಿ ವಂತಿಗೆ ಆಧಾರಿತ ಪಿಂಚಣಿ ಯೋಜನೆಯನ್ನು ಅಸಂಘಟಿತ ಕಾರ್ಮಿಕರಿಗೆ ಜಾರಿಗೆ ತಂದಿದೆ.
ಭಾರತ ದೇಶದ ಅರ್ಧದಷ್ಟು ಆದಾಯವು ಅಸಂಘಟಿತ ವಲಯದ 42 ಕೋಟಿ ಕಾರ್ಮಿಕರಿಂದ ಉತ್ಪಾದನೆಯಾಗುತ್ತಿದೆ. ನಮ್ಮ ದೈನಂದಿನ ಜೀವನದಲ್ಲಿ ಗೃಹ ಆಧಾರಿತ ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳು, ಬಿಸಿಯೂಟ ಸಿದ್ಧಪಡಿಸುವವರು, ಹಮಾಲಿಗಳು, ಇಟ್ಟಿಗೆ ಭಟ್ಟಿ ಕಾರ್ಮಿಕರು, ಕಟ್ಟಡ ಕಾರ್ಮಿಕರು, ಕೈಮಗ್ಗ ಕಾರ್ಮಿಕರು, ಚರ್ಮೋದ್ಯಮದ ಕಾರ್ಮಿಕರು, ಧ್ವನಿ ಮತ್ತು ದೃಶ್ಯ ಕಾರ್ಮಿಕರು ಮತ್ತು ಇದೇ ರೀತಿಯ ಇತರೆ ಉದ್ಯೋಗಗಳ ಕೆಲಸಗಾರರು ಅಸಂಘಟಿತ ಕಾರ್ಮಿಕರಾಗಿ ಕೆಲಸ ನಿರ್ವಹಿಸುತ್ತಿರುವುದನ್ನು ಕಾಣುತ್ತಿದ್ದೇವೆ.
ಫಲಾನುಭವಿಗಳಿಗೆ ಇರಬೇಕಾದ ಅಹರ್ತತೆಗಳು: ಯೋಜನೆಗೆ ಒಳಪಡುವ ಕಾರ್ಮಿಕರು ಅಸಂಘಟಿತ ವಲಯದ ಕಾರ್ಮಿಕರಾಗಿದ್ದು, 18ರಿಂದ 40 ವರ್ಷದೊಳಗಿರಬೇಕು. ಅವರ ಮಾಸಿಕ ಆದಾಯ ರೂ. 15 ಸಾವಿರ ಅಥವಾ ಅದಕ್ಕಿಂತ ಕಡಿಮೆ ಇರಬೇಕು. ಅವರು ಆದಾಯ ತೆರಿಗೆ, ಇ.ಎಸ್.ಐ./ಪಿ.ಎಫ್ /ಎನ್.ಪಿ.ಎಸ್. ಯೋಜನೆಯ ವ್ಯಾಪ್ತಿಗೆ ಒಳಪಟ್ಟಿರಬಾರದು. ಬ್ಯಾಂಕ್ ಉಳಿತಾಯ ಖಾತೆ ಮತ್ತು ಆಧಾರ್ ಸಂಖ್ಯೆ ಹೊಂದಿರಬೇಕು.
ಫಲಾನುಭವಿಗಳು ನೋಂದಣಿ ವಿಧಾನಗಳು: ಅರ್ಹ ಅಸಂಘಟಿತ ಕಾರ್ಮಿಕರು ಹತ್ತಿರದ ಕಾಮನ್ ಸರ್ವಿಸ್ ಸೆಂಟರ್ (ಸಿ.ಎಸ್.ಸಿ)ಗಳಲ್ಲಿ ಯೋಜನೆಯಡಿ ಫಲಾನುಭವಿಗಳಾಗಿ ನೋಂದಾಯಿಸಬಹುದು. ಸಿ.ಎಸ್.ಸಿ.ಗಳ ವಿವರಗಳನ್ನು ಹತ್ತಿರದ ಎಲ್.ಐ.ಸಿ ಶಾಖೆಗಳು, ಕಾರ್ಮಿಕ ಇಲಾಖೆ, ಕೇಂದ್ರ ಸರಕಾರದ ಕಾರ್ಮಿಕ ಇಲಾಖೆ ಇ.ಎಸ್.ಐ ಕಾರ್ಪೊರೇಷನ್ ಹಾಗೂ ಭವಿಷ್ಯ ನಿಧಿ ಸಂಘಟನೆಯ ಕಚೇರಿಗಳು ಹಾಗೂ ಇಲಾಖೆಯ ವೆಬ್ ವಿಳಾಸಗಳು ಹಾಗೂ https://maandhan.in ಗಳಲ್ಲಿ ಪಡೆಯಬಹುದಾಗಿದೆ.
ಕಾರ್ಮಿಕರು ತಮ್ಮೊಂದಿಗೆ ಆರಂಭಿಕ ವಂತಿಕೆ ಮೊತ್ತ, ಆಧಾರ್ ಕಾರ್ಡ್, ಖಾತೆ ಹೊಂದಿರುವ ಬ್ಯಾಂಕಿನ ಐ.ಎಫ್.ಎಸ್.ಸಿ ಕೋಡ್ ವಿವರಗಳೊಂದಿಗೆ ತಮ್ಮ ನಾಮನಿರ್ದೇಶಿತರ ವಿವರಗಳು ಮತ್ತು ಮೊಬೈಲ್‌ನೊಂದಿಗೆ ಕಾಮನ್ ಸರ್ವಿಸ್ ಸೆಂಟರ್‌ಗಳಿಗೆ ತೆರಳಿ ಈ ಯೋಜನೆಗೆ ನೋಂದಾಯಿಸಿಕೊಳ್ಳಬಹುದು.
ಯೋಜನೆಯ ಸೌಲಭ್ಯ, ಪ್ರಯೋಜನಗಳು: ಕೇಂದ್ರ ಸರ್ಕಾರವು ಚಂದಾದಾರರು ಪಾವತಿಸುವ ವಂತಿಕೆಗೆ ಸಮಾನಾಂತರ ವಂತಿಕೆಯನ್ನು ಪಿಂಚಣಿ ಖಾತೆಗೆ ಪಾವತಿಸುತ್ತದೆ. ಫಲಾನುಭವಿಯ ವಯಸ್ಸು 60 ವರ್ಷ ಪೂರ್ಣಗೊಂಡ ನಂತರ ತಿಂಗಳಿಗೆ 3000 ರೂ.ಗಳ ಖಚಿತ ಕನಿಷ್ಠ ಮಾಸಿಕ ಪಿಂಚಣಿಯನ್ನು ಪಡೆಯಲು ಅರ್ಹರಾಗುತ್ತಾರೆ. ಚಂದಾದಾರರು ಹತ್ತು ವರ್ಷದೊಳಗಾಗಿ ಯೋಜನೆಯಿಂದ ನಿರ್ಗಮಿಸಿದ್ದಲ್ಲಿ ಅವರು ಪಾವತಿಸಿದ ವಂತಿಕೆಯನ್ನು ಮಾತ್ರ ಆ ಅವಧಿಗೆ ಉಳಿತಾಯ ಖಾತೆಗೆ ಪಾವತಿಸಲಾಗುವ ಬಡ್ಡಿಯೊಂದಿಗೆ ಹಿಂದಿರುಗಿಸಲಾಗುತ್ತದೆ. 10 ವರ್ಷ ಅಥವಾ ಅದಕ್ಕಿಂತ ಹೆಚ್ಚು ಅವಧಿಯ ನಂತರ ನಿರ್ಗಮಿಸಿದ್ದಲ್ಲಿ ಅವರು ಪಾವತಿಸಿದ ವಂತಿಕೆಯೊಂದಿಗೆ ಪಿಂಚಣಿ ಖಾತೆಗೆ ಜಮೆಯಾಗಿರುವ ಬಡ್ಡಿ ಅಥವಾ ಉಳಿತಾಯ ಖಾತೆಗೆ ಪಾವತಿಸಲಾಗುವ ಬಡ್ಡಿ ಇವುಗಳಲ್ಲಿ ಯಾವುದು ಹೆಚ್ಚೋ ಅದನ್ನು ಪಾವತಿಸಲಾಗುವುದು. ಫಲಾನುಭವಿಯ ನಿರಂತರವಾಗಿ ವಂತಿಕೆಯನ್ನು ಪಾವತಿಸಿದ್ದು, ಅವರು 60 ವರ್ಷದ ಒಳಗಾಗಿ ಮೃತಪಟ್ಟಲ್ಲಿ ಅಥವಾ ಶಾಶ್ವತ ಅಂಗ ನ್ಯೂನತೆಯಿಂದ ವಂತಿಕೆಯನ್ನು ಪಾವತಿಸಲು ಸಾಧ್ಯವಾಗದಿದ್ದಲ್ಲಿ ಅವರ ಸಂಗಾತಿಯು ತದನಂತರ ಈ ಯೋಜನೆಗೆ ಸೇರಬಹುದಾಗಿದ್ದು, ವಂತಿಕೆಯನ್ನು ಪಾವತಿಸಿ ಮುಂದುವರೆಸಬಹುದಾಗಿದೆ ಅಥವಾ ಅವರ ವಂತಿಕೆಯನ್ನು ಬಡ್ಡಿಯೊಂದಿಗೆ ಪಡೆಯಲು ಅರ್ಹರು. ಪಿಂಚಣಿ ಆರಂಭಗೊಂಡ ನಂತರ ಚಂದಾದಾರರು ಮೃತಪಟ್ಟಲ್ಲಿ, ಅವರ ಪತ್ನಿ / ಪತಿ ಮಾತ್ರ ಪಿಂಚಣಿಯ ಶೇ. 50ರಷ್ಟು ಪಿಂಚಣಿಯನ್ನು ಪಡೆಯಲು ಅರ್ಹರು. ಯೋಜನೆಯು ವಿದ್ಯುನ್ಮಾನ ಆಧಾರಿತವಾಗಿದ್ದು, ಎಸ್.ಎಂ.ಎಸ್ ಮೂಲಕ ಎಲ್ಲಾ ವ್ಯವಹಾರಗಳ ಮಾಹಿತಿಯನ್ನು ಫಲಾನುಭವಿಗಳಿಗೆ ಕಾಲ ಕಾಲಕ್ಕೆ ತಿಳಿಸಲಾಗುವುದು.
ಸಂಪರ್ಕಿಸಬೇಕಾದ ವಿಳಾಸಗಳು: ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕಾರ್ಮಿಕ ಇಲಾಖೆ ಕಚೇರಿಗಳು, ಶಾಖಾ ಕಚೇರಿಗಳು, ಎಲ್.ಐ.ಸಿಯ ಶಾಖಾ ಕಚೇರಿಗಳು, ಇ.ಪಿ.ಎಫ್.ಒ ಮತ್ತು ಇ.ಎಸ್.ಐ.ಸಿ ಕಚೇರಿಗಳಲ್ಲಿ ಟೋಲ್ ಫ್ರೀ ಕಾಲ್ ಸೆಂಟರ್ ಸಂಖ್ಯೆ: 1800-267-6888, ಎಲ್.ಐ.ಸಿಯ ವೆಬ್‌ಸೈಟ್ ವಿಳಾಸ: https://licindia.in, ಸಮೀಪದ ಸಿ.ಎಸ್.ಸಿ ಸೆಂಟರ್‌ಗಳಿಗಾಗಿ https://maandhan.in ಸಂಪರ್ಕಿಸಬಹುದು. ಅಸಂಘಟಿತ ಕಾರ್ಮಿಕರು ಹೆಚ್ಚಿನ ಮಾಹಿತಿಗಾಗಿ ಕಾರ್ಮಿಕ ಸಹಾಯವಾಣಿ ಸಂಖ್ಯೆಗೆ-155214 ಕರೆಮಾಡಿ ಗೊಂದಲಗಳನ್ನು ಪರಿಹರಿಸಿಕೊಳ್ಳಬಹುದಾಗಿದೆ.
-
ಯುವರಾಜ್ ಸಿ.ಎಲಿಗಾರ.
ಪ್ರಶಿಕ್ಷಣಾರ್ಥಿ, ವಾರ್ತಾ ಮತ್ತು ಸಾ.ಸಂ. ಇಲಾಖೆ, ಗದಗ.



