ಲಕ್ನೋ: ಫೇರ್ವೆಲ್ ಪಾರ್ಟಿ ಮುಗಿಸಿ ಮನೆಗೆ ವಾಪಸ್ ಆಗುತ್ತಿದ್ದ ವಿದ್ಯಾರ್ಥಿಯೊಬ್ಬನ ಕಾರು ನಿಯಂತ್ರಣ ತಪ್ಪಿ ಹಲವರಿಗೆ ಡಿಕ್ಕಿ ಹೊಡೆದ ಪರಿಣಾಮ 6 ವರ್ಷದ ಬಾಲಕ ಮೃತಪಟ್ಟಿರುವ ದುರ್ಘಟನೆ ಲಕ್ನೋದಲ್ಲಿ ನಡೆದಿದೆ.
21 ವರ್ಷದ ವಿದ್ಯಾರ್ಥಿ ಗೌರವ್ ಸಿಂಗ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಕಾರಿನ ಟೈರ್ ಸ್ಫೋಟಗೊಂಡು ನಿಯಂತ್ರಣ ತಪ್ಪಿದೆಯೆಂದು ತಿಳಿದುಬಂದಿದೆ. ಮೊದಲು ನಿಲ್ಲಿಸಿದ್ದ ಬೈಕ್‌ಗೆ ಡಿಕ್ಕಿ ಹೊಡೆದ ಕಾರು, ನಂತರ ಐವರ ಮೇಲೆ ಹರಿದಿದೆ. ಅಪಘಾತದಲ್ಲಿ ಅರ್ಮಾನ್, ಸಾಧನಾ ಪಟೇಲ್, ಆಕೆಯ ತಾಯಿ ಮೀನಾ ದೇವಿ ಮತ್ತು ಆರು ವರ್ಷದ ಮಗ ದೀಕ್ಷಾಂತ್ ಗಂಭೀರವಾಗಿ ಗಾಯಗೊಂಡರು.
ತೀವ್ರವಾಗಿ ಗಾಯಗೊಂಡಿದ್ದ ದೀಕ್ಷಾಂತ್ ನನ್ನು ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಬಾಲಕ ಕೇಂದ್ರೀಯ ವಿದ್ಯಾಲಯದಲ್ಲಿ 2ನೇ ತರಗತಿಯಲ್ಲಿ ಓದುತ್ತಿದ್ದನು.
ಅಪಘಾತದ ನಂತರ ಕಾರು ಇ-ರಿಕ್ಷಾ ಮತ್ತು ಆಟೋಗೆ ಸಹ ಡಿಕ್ಕಿ ಹೊಡೆದಿದ್ದು, ಇ-ರಿಕ್ಷಾ ಚಾಲಕ ಅವಧ್ ಬಿಹಾರಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆ ಬೆನ್ನಲ್ಲೇ ವಿದ್ಯಾರ್ಥಿ ಕಾರನ್ನು ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾನೆ. ಪೊಲೀಸರು ವಾಹನವನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.



