ಹಾಸನ: ನಗರದಲ್ಲಿ ಎಂಡಿಎಂಎ ಮಾದಕ ವಸ್ತುಗಳ ಮಾರಾಟ ಜಾಲವನ್ನು ಪೊಲೀಸರು ಭೇದಿಸಿದ್ದು, 5 ಆರೋಪಿಗಳನ್ನು ಬಂಧಿಸಿದ್ದಾರೆ. ರಾಜ್ಕುಮಾರ್ ನಗರ ಬಳಿಯ ಚೆಕ್ಪೋಸ್ಟ್ನಲ್ಲಿ ತಪಾಸಣೆ ವೇಳೆ ಕಾರಿನಲ್ಲಿ ಸುಮಾರು 40 ಗ್ರಾಂ ಎಂಡಿಎಂಎ ಪತ್ತೆಯಾಗಿದ್ದು, ಅದರ ಮೌಲ್ಯ ರೂ.2 ಲಕ್ಷಕ್ಕೂ ಅಧಿಕವೆಂದು ಅಂದಾಜಿಸಲಾಗಿದೆ.
ಖಚಿತ ಮಾಹಿತಿಯ ಮೇರೆಗೆ ಚೆಕ್ಪೋಸ್ಟ್ನಲ್ಲಿ ಸಂಚರಿಸುತ್ತಿದ್ದ ಎರ್ಟಿಗಾ ಕಾರನ್ನು ತಪಾಸಣೆ ನಡೆಸಿದಾಗ ಆರೋಪಿಗಳು ಸಿಕ್ಕಿಬಿದ್ದರು. ಬಂಧಿತರನ್ನು ಶಿವಮೊಗ್ಗ ಮೂಲದ ಫರ್ವೀಜ್ (29), ಸುಹೇಲ್ (24), ಅಬ್ದುಲ್ ಯಾಸಿನ್ (20), ಇಬ್ರತ್ ಖಾನ್ (24) ಹಾಗೂ ಹಾಸನದ ಸೈಯದ್ ಯೂಸಫ್ (23) ಎಂದು ಗುರುತಿಸಲಾಗಿದೆ. ಇವರಲ್ಲಿ 4 ಮಂದಿ ಶಿವಮೊಗ್ಗ ಜಿಲ್ಲೆಯವರಾಗಿದ್ದು, ಒಬ್ಬ ಹಾಸನ ನಿವಾಸಿ ಎಂದು ಪೊಲೀಸರು ತಿಳಿಸಿದ್ದಾರೆ.
40 ಗ್ರಾಂ ಎಂಡಿಎಂಎ ಹಾಗೂ ಆರೋಪಿಗಳು ಬಳಸುತ್ತಿದ್ದ ಕಾರನ್ನು ವಶಕ್ಕೆ ಪಡೆಯಲಾಗಿದೆ. ಪೆನ್ಷನ್ ಮೊಹಲ್ಲಾ ಠಾಣೆಯ ಸಿಪಿಐ ಸ್ವಾಮಿನಾಥ್ ನೇತೃತ್ವದಲ್ಲಿ ಪಿಎಸ್ಐ ರವಿಶಂಕರ್ ಹಾಗೂ ಸಿಬ್ಬಂದಿ ಪ್ರಸನ್ನಕುಮಾರ್, ದಿಲೀಪ್, ಪುನೀತ್, ಲೋಕೇಶ್, ಹನುಮೇಶ್ ಸೇರಿದಂತೆ ಇತರರು ಕಾರ್ಯಾಚರಣೆ ನಡೆಸಿದರು. ಪ್ರಕರಣವನ್ನು ಪೆನ್ಷನ್ ಮೊಹಲ್ಲಾ ಪೊಲೀಸ್ ಠಾಣೆಯಲ್ಲಿ ದಾಖಲಿಸಿ ಮುಂದಿನ ತನಿಖೆ ಕೈಗೊಳ್ಳಲಾಗಿದೆ.
ಇದೇ ವೇಳೆ, ಚಿಕ್ಕಮಗಳೂರಿನಲ್ಲಿ ನಡೆದ ವಿಶೇಷ ಕಾರ್ಯಾಚರಣೆಯಲ್ಲಿ 5 ಕೆ.ಜಿ 850 ಗ್ರಾಂ ಗಾಂಜಾ ವಶಕ್ಕೆ ಪಡೆಯಲಾಗಿದೆ. ರೈಲ್ವೆ ನಿಲ್ದಾಣದ ಸಮೀಪ ಮಾರಾಟಕ್ಕೆ ಯತ್ನಿಸುತ್ತಿದ್ದ ವ್ಯಕ್ತಿಯನ್ನು ಬಂಧಿಸಲಾಗಿದ್ದು, ವಶಪಡಿಸಿಕೊಂಡ ಗಾಂಜಾದ ಮೌಲ್ಯ ಸುಮಾರು 3 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.
ಬಂಧಿತನನ್ನು ವಿಜಯ್ ಕುಮಾರ್ ಎಂದು ಗುರುತಿಸಲಾಗಿದ್ದು, ಆತ ಬೆಂಗಳೂರಿನ ನಿವಾಸಿ ಎಂದು ತಿಳಿದುಬಂದಿದೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಗಾಂಜಾ ಸರಬರಾಜು ಜಾಲದ ಕುರಿತು ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.



