ಬೆಂಗಳೂರು: ರಾಜ್ಯದಲ್ಲಿ ಎಂಬಿಎ, ಎಂಸಿಎ, ಎಂ.ಟೆಕ್, ಎಂಇ ಸೇರಿದಂತೆ ವಿವಿಧ ಸ್ನಾತಕೋತ್ತರ ಕೋರ್ಸ್‌ಗಳ ಪ್ರವೇಶಕ್ಕಾಗಿ ಕಾಯುತ್ತಿರುವ ವಿದ್ಯಾರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಇನ್ನೂ ಸ್ಪಷ್ಟ ಮಾಹಿತಿ ಸಿಗದಿರುವುದು ಆತಂಕಕ್ಕೆ ಕಾರಣವಾಗಿದೆ.
PGCET ಮೊದಲ ಸುತ್ತಿನ ಸೀಟ್ ಹಂಚಿಕೆ ಪ್ರಕ್ರಿಯೆ ಪೂರ್ಣಗೊಂಡಿದ್ದು, 23,164 ಸೀಟುಗಳನ್ನು ಹಂಚಿಕೆ ಮಾಡಲಾಗಿದೆ. ಆದರೆ ಇನ್ನೂ 9,574 ಎಂಸಿಎ, 2,195 ಎಂಬಿಎ ಹಾಗೂ 1,821 ಎಂ.ಟೆಕ್ ಸೀಟುಗಳು ಖಾಲಿ ಉಳಿದಿವೆ ಎನ್ನಲಾಗಿದೆ.
ಸಾಮಾನ್ಯವಾಗಿ ಮೊದಲ ಸುತ್ತಿನ ಬಳಿಕ ಎರಡನೇ ಸುತ್ತಿನಲ್ಲಿ ಆಪ್ಶನ್ ಎಂಟ್ರಿ ಬದಲಾಯಿಸಿ ಉತ್ತಮ ಕಾಲೇಜು ಆಯ್ಕೆ ಮಾಡಿಕೊಳ್ಳುವ ಅವಕಾಶಕ್ಕಾಗಿ ವಿದ್ಯಾರ್ಥಿಗಳು ಕಾಯುತ್ತಿದ್ದಾರೆ. ಆದರೆ ಈ ಬಾರಿ 2ನೇ ಹಾಗೂ 3ನೇ ಸುತ್ತಿನ ಕೌನ್ಸೆಲಿಂಗ್ ನಡೆಯಲಿದೆಯೇ ಎಂಬ ಬಗ್ಗೆ ಕೆಇಎಯಿಂದ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.
ಸಾವಿರಾರು ವಿದ್ಯಾರ್ಥಿಗಳಲ್ಲಿ ಆತಂಕ:
ತಾಂತ್ರಿಕ ಶಿಕ್ಷಣ ಇಲಾಖೆಯಿಂದ ಸೀಟ್ ಮ್ಯಾಟ್ರಿಕ್ಸ್ ಸಲ್ಲಿಕೆಯಲ್ಲಿ ವಿಳಂಬವಾಗಿದ್ದರಿಂದ ಈ ಬಾರಿಯ PGCET ಕೌನ್ಸೆಲಿಂಗ್ ಪ್ರಕ್ರಿಯೆ ಈಗಾಗಲೇ ತಡವಾಗಿದೆ. ಇದೀಗ ಒಂದೇ ಸುತ್ತಿನಲ್ಲಿ ಪ್ರವೇಶ ಪ್ರಕ್ರಿಯೆ ಪೂರ್ಣಗೊಳಿಸಲು ಕೆಇಎ ಮುಂದಾಗಿದೆಯೇ ಎಂಬ ಅನುಮಾನ ವಿದ್ಯಾರ್ಥಿಗಳಲ್ಲಿ ಮೂಡಿದೆ.
ಇನ್ನೊಂದೆಡೆ, ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯ ವೇಳಾಪಟ್ಟಿಯಂತೆ ಅಕ್ಟೋಬರ್ 15ರಿಂದ ಸ್ನಾತಕೋತ್ತರ ತರಗತಿಗಳು ಆರಂಭವಾಗಬೇಕಿದೆ. ಪ್ರವೇಶ ಗಡುವು ವಿಸ್ತರಿಸುವಂತೆ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳು ಮನವಿ ಮಾಡಿದ್ದರೂ, ನಿಗದಿತ ವೇಳಾಪಟ್ಟಿಯನ್ನು ಪಾಲಿಸುವಂತೆ ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ.
ಕೆಇಎ ವೆಬ್‌ಸೈಟ್‌ನಲ್ಲೂ 2ನೇ ಹಾಗೂ 3ನೇ ಸುತ್ತಿನ ಕುರಿತು ಸ್ಪಷ್ಟ ಮಾಹಿತಿ ಇಲ್ಲದಿರುವುದರಿಂದ ಕಾಲೇಜು ಆಯ್ಕೆ, ಶುಲ್ಕ ಹಾಗೂ ಇತರೆ ಹಣಕಾಸಿನ ವ್ಯವಸ್ಥೆ ಮಾಡಿಕೊಳ್ಳಲು ವಿದ್ಯಾರ್ಥಿಗಳು ಪರದಾಡುವಂತಾಗಿದೆ.ಅಕ್ಟೋಬರ್ 7, 8 ಪ್ರಮುಖ ದಿನಾಂಕ
ಮೊದಲ ಸುತ್ತಿನಲ್ಲಿ ಸೀಟ್ ಪಡೆದಿರುವ ಅಭ್ಯರ್ಥಿಗಳಿಗೆ ಶುಲ್ಕ ಪಾವತಿಸಲು ಅಕ್ಟೋಬರ್ 7 ಕೊನೆಯ ದಿನವಾಗಿದ್ದು, ಕಾಲೇಜಿಗೆ ಪ್ರವೇಶ ಪಡೆಯಲು ಅಕ್ಟೋಬರ್ 8 ಅಂತಿಮ ದಿನವಾಗಿದೆ.
ಇನ್ನೂ ಸೀಟ್ ಪಡೆಯದ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ತಕ್ಷಣವೇ 2ನೇ ಹಾಗೂ 3ನೇ ಸುತ್ತಿನ ಕೌನ್ಸೆಲಿಂಗ್ ಕುರಿತು ಸ್ಪಷ್ಟ ಮಾಹಿತಿ ಪ್ರಕಟಿಸಬೇಕು ಎಂದು ವಿದ್ಯಾರ್ಥಿಗಳು ಆನ್‌ಲೈನ್ ಅಭಿಯಾನದ ಮೂಲಕ ಕೆಇಎಗೆ ಒತ್ತಾಯಿಸುತ್ತಿದ್ದಾರೆ.



