ಹಾವೇರಿ: ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಸಾವಿರ ದಿನಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ, ಹಾವೇರಿ ನಗರದಲ್ಲಿ ಇಂದು ಭೂ ಗ್ಯಾರಂಟಿ ಸಮರ್ಪಣಾ ಸಮಾವೇಶ ಆಯೋಜಿಸಲಾಗಿದೆ. ಹಾಡಿ, ಹಟ್ಟಿ, ತಾಂಡಾಗಳಲ್ಲಿ ಹಲವು ವರ್ಷಗಳಿಂದ ದಾಖಲೆ ರಹಿತವಾಗಿ ವಾಸಿಸುತ್ತಿರುವ ಜನರಿಗೆ ಕಂದಾಯ ಇಲಾಖೆಯ ವಿವಿಧ ಹಕ್ಕುಪತ್ರಗಳನ್ನು ವಿತರಿಸಲಾಗುತ್ತಿದೆ.
ಕಾರ್ಯಕ್ರಮಕ್ಕಾಗಿ ನಗರದ ಆರ್ಟಿಒ ಕಚೇರಿ ಬಳಿಯ ಅಜ್ಜಯ್ಯನ ಗದ್ದುಗೆ ಪ್ರದೇಶದಲ್ಲಿ ಬೃಹತ್ ವೇದಿಕೆ ಸಜ್ಜುಗೊಂಡಿದೆ. ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಕಂದಾಯ ಸಚಿವ ಕೃಷ್ಣ ಬೈರೇಗೌಡ ಸೇರಿದಂತೆ ಸಂಪುಟದ ಬಹುತೇಕ ಸಚಿವರು ಹಾಗೂ ಜಿಲ್ಲೆಯ ಶಾಸಕರು ಭಾಗವಹಿಸಲಿದ್ದಾರೆ.
ಈ ಸಮಾವೇಶದಲ್ಲಿ ಒಂದು ಲಕ್ಷಕ್ಕೂ ಅಧಿಕ ಫಲಾನುಭವಿಗಳು ಹಕ್ಕುಪತ್ರಗಳನ್ನು ಪಡೆಯಲಿದ್ದಾರೆ. ಹಾವೇರಿ ಜಿಲ್ಲೆಯಲ್ಲೇ ಕಂದಾಯ ಗ್ರಾಮ 20,186, ಇ-ಪೋತಿ 7,825, ದರ್ಖಾಸ್ತು ಪೋಡಿ 502, ಪಿಎಂಜಿಎ 1,675 ಹಾಗೂ ಬಗರ್ ಹುಕುಂ 16 ಸೇರಿ ಒಟ್ಟು 30,204 ಫಲಾನುಭವಿಗಳಿದ್ದಾರೆ.
ಇದೇ ವೇಳೆ ಚಿತ್ರದುರ್ಗ ಜಿಲ್ಲೆಯಿಂದ 5,500, ದಾವಣಗೆರೆ 20,000, ಶಿವಮೊಗ್ಗ 10,000, ಚಿಕ್ಕಮಗಳೂರು 7,000, ಧಾರವಾಡ, ಗದಗ ಮತ್ತು ಕೊಪ್ಪಳ ಜಿಲ್ಲೆಗಳಿಂದ ತಲಾ 10,000 ಹಾಗೂ ಉತ್ತರ ಕನ್ನಡ ಜಿಲ್ಲೆಯಿಂದ 1,000 ಫಲಾನುಭವಿಗಳು ಭಾಗವಹಿಸಲಿದ್ದು, ಒಟ್ಟು 1.23 ಲಕ್ಷಕ್ಕೂ ಅಧಿಕ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ನಡೆಯಲಿದೆ.



