ವಿಜಯಪುರ: ವಿಧಾನಸಭೆ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಸಲ್ಲಿಸಲಾಗಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ವಿಜಯಪುರ ಕ್ಷೇತ್ರದ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಅಬ್ದುಲ್ ಹಮೀದ್ ಮುಶ್ರೀಫ್ ಆರೋಪಿಸಿದ್ದರು.
ಈ ಸಂಬಂಧ ಸಲ್ಲಿಸಲಾದ ಮನವಿಯನ್ನು ಕಲಬುರಗಿ ಉಚ್ಚ ನ್ಯಾಯಾಲಯ ವಜಾಗೊಳಿಸಿ ಮನವಿದಾರರಿಗೆ ದಂಡ ವಿಧಿಸಿತ್ತು. ನಂತರ ಅವರು ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಇದೀಗ ಸುಪ್ರೀಂ ಕೋರ್ಟ್ ಮನವಿಯನ್ನು ವಜಾಗೊಳಿಸಿ ಮನವಿದಾರರಿಗೆ ದಂಡ ವಿಧಿಸಿದೆ.
ಈ ಕುರಿತು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಮ್ಮ ಎಕ್ಸ್ ಖಾತೆಯಲ್ಲಿ ಪ್ರತಿಕ್ರಿಯಿಸಿ, ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಸುಳ್ಳು ಆರೋಪ ಮಾಡಿ ತಮ್ಮ ವಿರುದ್ಧ ಚುನಾವಣಾ ಮನವಿ ದಾಖಲಿಸಲಾಗಿತ್ತು ಎಂದು ತಿಳಿಸಿದ್ದಾರೆ. ಕಲಬುರಗಿ ಉಚ್ಚ ನ್ಯಾಯಾಲಯವು 2026ರ ಜು.18ರಂದು ಮನವಿಯನ್ನು ವಜಾಗೊಳಿಸಿ ದಂಡ ವಿಧಿಸಿತ್ತು ಎಂದು ಹೇಳಿದ್ದಾರೆ.
ಆ ತೀರ್ಪನ್ನು ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸಲಾಗಿತ್ತು. ಅಲ್ಲಿಯೂ ಮನವಿ ವಜಾಗೊಂಡಿದ್ದು ದಂಡ ವಿಧಿಸಲಾಗಿದೆ. ತೀರ್ಪಿನ ಮರುಪರಿಶೀಲನೆಗಾಗಿ ಮತ್ತೊಮ್ಮೆ ಮನವಿ ಸಲ್ಲಿಸಿ ರಾಜಕೀಯ ಲಾಭ ಪಡೆಯಲು ಯತ್ನಿಸಲಾಯಿತು. ಆದರೆ ಆ ಪ್ರಯತ್ನ ವಿಫಲವಾಗಿದೆ ಎಂದು ತಿಳಿಸಿದ್ದಾರೆ.
ಈ ರೀತಿಯ ಬೆದರಿಕೆಗಳಿಗೆ ನಾನು ಹೆದರುವವನಲ್ಲ. ನನ್ನ ಮೇಲೆ ರಾಜಕೀಯ ಪ್ರೇರಿತ ಹಾಗೂ ಆಧಾರರಹಿತ ಆರೋಪಗಳನ್ನು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಂಡು ಅಂತ್ಯದವರೆಗೆ ಕೊಂಡೊಯ್ಯುತ್ತೇನೆ. ಸತ್ಯವನ್ನು ಮರೆಮಾಚಲು ಯಾರಿಂದಲೂ ಸಾಧ್ಯವಿಲ್ಲ. ವಿಜಯಪುರದ ಜನತೆ ಸದಾ ನನ್ನೊಂದಿಗಿದ್ದಾರೆ ಎಂಬ ವಿಶ್ವಾಸ ನನಗಿದೆ ಎಂದು ಯತ್ನಾಳ್ ತಿಳಿಸಿದ್ದಾರೆ.



