ಗುವಾಹಟಿ: ಅಸ್ಸಾಂನ ಗುವಾಹಟಿಯಲ್ಲಿ ಬ್ರಹ್ಮಪುತ್ರ ನದಿಯ ಮೇಲೆ ನಿರ್ಮಿಸಲಾದ 6 ಪಥಗಳ ಎಕ್ಸ್ಟ್ರಾಡೋಸ್ಡ್ ಪ್ರಿಸ್ಟ್ರೆಸ್ಡ್ ಕಾಂಕ್ರೀಟ್ (ಪಿಎಸ್ಸಿ) ಸೇತುವೆಯಾದ ಕುಮಾರ್ ಭಾಸ್ಕರ್ ವರ್ಮಾ ಸೇತುವನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಉದ್ಘಾಟಿಸಿದರು.
ಸುಮಾರು ₹3,030 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಈ ಸೇತುವೆ ಗುವಾಹಟಿಯನ್ನು ಉತ್ತರ ಗುವಾಹಟಿಯೊಂದಿಗೆ ಸಂಪರ್ಕಿಸುತ್ತದೆ. ಇದರ ಮೂಲಕ ಪ್ರಯಾಣದ ಅವಧಿ ಸುಮಾರು 60 ನಿಮಿಷಗಳಿಂದ ಕೇವಲ 7 ನಿಮಿಷಗಳಿಗೆ ಇಳಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬ್ರಹ್ಮಪುತ್ರ ನದಿಮೇಲೆ ನಿರ್ಮಿಸಲಾದ ಈ ಸೇತುವೆ ಈಶಾನ್ಯ ಭಾರತದಲ್ಲಿ ಮೊದಲ ಎಕ್ಸ್ಟ್ರಾಡೋಸ್ಡ್ ವಿನ್ಯಾಸದ ಸೇತುವೆಯಾಗಿದ್ದು, ತಾಂತ್ರಿಕವಾಗಿ ಅತ್ಯಾಧುನಿಕ ಸೌಕರ್ಯಗಳನ್ನು ಹೊಂದಿದೆ.
ಸೇತುವೆ ಉದ್ಘಾಟನೆಯ ನಂತರ ಮಾತನಾಡಿದ ಪ್ರಧಾನಿ, ಈ ಯೋಜನೆ ಈಶಾನ್ಯ ಭಾರತದ ಮೂಲಸೌಕರ್ಯ ಅಭಿವೃದ್ಧಿಗೆ ಹೊಸ ದಿಕ್ಕು ನೀಡಲಿದೆ ಎಂದು ಹೇಳಿದರು. ಈ ಸೇತುವೆ ಪ್ರದೇಶದ ಸಂಪರ್ಕ ವ್ಯವಸ್ಥೆಯನ್ನು ಸುಧಾರಿಸುವುದರ ಜೊತೆಗೆ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ನೀಡಲಿದೆ ಎಂದು ತಿಳಿಸಿದರು.



