ಮುಂಬೈ: ಮಹಾರಾಷ್ಟ್ರದ ರಾಜಧಾನಿ ಮುಂಬೈನಲ್ಲಿ ಮುಂಗಾರು ಮಳೆ ತೀವ್ರ ಸ್ವರೂಪ ಪಡೆದಿದ್ದು, ನಗರದ ವಿವಿಧ ಭಾಗಗಳಲ್ಲಿ ಅವಾಂತರಗಳು ಸೃಷ್ಟಿಯಾಗಿವೆ. ಭಾರೀ ಮಳೆಯ ಪರಿಣಾಮ ಭಾನುವಾರ ಒಂದೇ ದಿನ ನಡೆದ ವಿವಿಧ ಘಟನೆಗಳಲ್ಲಿ ಎಂಟು ಮಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ.
ಮುಂಖುರ್ಡ್ ಪ್ರದೇಶದಲ್ಲಿ ಚಾಲ್ ಕಟ್ಟಡದ ಒಂದು ಭಾಗ ಕುಸಿದ ಪರಿಣಾಮ ಆರು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನೊಂದೆಡೆ ಮರ ಬಿದ್ದು ಒಬ್ಬರು ಸಾವನ್ನಪ್ಪಿದರೆ, ಮತ್ತೊಂದು ಪ್ರದೇಶದಲ್ಲಿ ಕಟ್ಟಡದ ಗ್ರಿಲ್ ಪಾದಚಾರಿ ಮಾರ್ಗದ ಮೇಲೆ ಕುಸಿದು ಬಿದ್ದ ಪರಿಣಾಮ ಮತ್ತೊಬ್ಬರು ಮೃತಪಟ್ಟಿದ್ದಾರೆ.
ಸೋಮವಾರವೂ ಮಳೆಯ ಅಬ್ಬರ ಮುಂದುವರಿದಿದ್ದು, ಹಲವೆಡೆ ಭೂಕುಸಿತ ಮತ್ತು ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದರ ಪರಿಣಾಮ ರೈಲು ಹಾಗೂ ರಸ್ತೆ ಸಂಚಾರದಲ್ಲಿ ಭಾರೀ ವ್ಯತ್ಯಯ ಉಂಟಾಗಿದ್ದು, ಪ್ರಯಾಣಿಕರು ಸಂಕಷ್ಟ ಎದುರಿಸುತ್ತಿದ್ದಾರೆ.
ಮುಂಬೈ–ಪುಣೆ ಎಕ್ಸ್ಪ್ರೆಸ್ವೇಯಲ್ಲಿ ಭೂಕುಸಿತ ಮತ್ತು ಹಾನಿ ಸಂಭವಿಸಿದ ಹಿನ್ನೆಲೆಯಲ್ಲಿ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಇದರಿಂದ ಮುಂಬೈ ಮತ್ತು ಪುಣೆ ನಡುವಿನ ಸಂಪರ್ಕಕ್ಕೆ ತೀವ್ರ ಹೊಡೆತ ಬಿದ್ದಿದೆ.
ಭಾರೀ ಮಳೆಯ ಪರಿಣಾಮ ನಗರಕ್ಕೆ ಆಗಮಿಸುವ ಹಾಗೂ ನಗರದಿಂದ ಹೊರಡುವ 16 ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ. ಜೊತೆಗೆ ಒಂಬತ್ತು ರೈಲುಗಳ ಮಾರ್ಗವನ್ನು ಬದಲಾವಣೆ ಮಾಡಲಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.
ಇಂದು ಮುಂಜಾನೆ 3.05ರ ಸುಮಾರಿಗೆ ಕರ್ಜತ್–ಲೋನಾವಾಲ ನಡುವಿನ ಭೋರ್ ಘಾಟ್ ವಿಭಾಗದ ಠಾಕೂರ್ವಾಡಿ ಬಳಿ ಭೂಕುಸಿತ ಸಂಭವಿಸಿದೆ. ಬಳಿಕ ಖಂಡಾಲಾ ಮತ್ತು ಮಂಕಿ ಹಿಲ್ ನಡುವೆಯೂ ಮತ್ತೊಂದು ಭೂಕುಸಿತ ವರದಿಯಾಗಿದೆ.
ನಿರಂತರ ಮಳೆಯಿಂದ ಭೋರ್ ಘಾಟ್ ಪ್ರದೇಶದ ಪ್ರಮುಖ ರೈಲು ಹಳಿಗಳಾದ ಅಪ್ ಲೈನ್, ಡೌನ್ ಲೈನ್ ಹಾಗೂ ಮಧ್ಯ ಮಾರ್ಗದ ಮೇಲೂ ಭೂಕುಸಿತ ಸಂಭವಿಸಿದ್ದು, ರೈಲು ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಕರ್ಜತ್ ಮತ್ತು ಲೋನಾವಾಲ ನಡುವಿನ ಘಾಟ್ ವಿಭಾಗದಲ್ಲಿ ಪರಿಸ್ಥಿತಿ ಗಂಭೀರವಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ರೈಲ್ವೆ ಇಲಾಖೆ ಹಲವು ದೂರ ಪ್ರಯಾಣದ ರೈಲುಗಳನ್ನು ರದ್ದುಗೊಳಿಸಿದ್ದು, ಅಗತ್ಯವಿರುವ ರೈಲುಗಳ ಮಾರ್ಗಗಳನ್ನು ಬದಲಾಯಿಸಿ ಸಂಚಾರವನ್ನು ನಿಯಂತ್ರಿಸಲು ಕ್ರಮ ಕೈಗೊಂಡಿದೆ.
ಮುಂಬೈನಲ್ಲಿ ಮಳೆ ಮುಂದುವರಿಯುತ್ತಿರುವ ಹಿನ್ನೆಲೆಯಲ್ಲಿ ಆಡಳಿತವು ಸಾರ್ವಜನಿಕರು ಅಗತ್ಯವಿಲ್ಲದಿದ್ದರೆ ಪ್ರಯಾಣವನ್ನು ತಪ್ಪಿಸುವಂತೆ ಸಲಹೆ ನೀಡಿದ್ದು, ತುರ್ತು ಸೇವಾ ಸಿಬ್ಬಂದಿಯನ್ನು ಸನ್ನದ್ಧ ಸ್ಥಿತಿಯಲ್ಲಿ ನಿಯೋಜಿಸಲಾಗಿದೆ.



