HomeGadag Newsಕಾಂಗ್ರೆಸ್ ರಾಜ್ಯದ ಜನತೆಗೆ ಸಮಸ್ಯೆಗಳನ್ನು ನಿರ್ಮಿಸಿದ ಸರ್ಕಾರ: ಎನ್. ರವಿಕುಮಾರ್

ಕಾಂಗ್ರೆಸ್ ರಾಜ್ಯದ ಜನತೆಗೆ ಸಮಸ್ಯೆಗಳನ್ನು ನಿರ್ಮಿಸಿದ ಸರ್ಕಾರ: ಎನ್. ರವಿಕುಮಾರ್

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ರಾಜ್ಯದ ಕಾಂಗ್ರೆಸ್ ಸರ್ಕಾರಕ್ಕೆ 1000 ದಿನಗಳ ಸಂಭ್ರಮಾಚರಣೆ ಮಾಡಲು ಯಾವುದೇ ನೈತಿಕತೆ ಇಲ್ಲ. ಇದು ರಾಜ್ಯದ ಜನತೆಗೆ ಸಾವಿರ ಸಮಸ್ಯೆಗಳನ್ನು ನಿರ್ಮಿಸಿದ ಸರ್ಕಾರವಾಗಿದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್. ರವಿಕುಮಾರ್ ಆರೋಪಿಸಿದರು.

ಅವರು ಶನಿವಾರ ಶಿರಹಟ್ಟಿಯ ಶಾಸಕರ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಸ್ವತಃ ಮುಖ್ಯಮಂತ್ರಿಗಳು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಹಗರಣದಲ್ಲಿ ಭಾಗಿಯಾಗಿ ಸುಮಾರು 14 ಸೈಟುಗಳನ್ನು ವಾಪಸ್ ನೀಡಿರುವುದು ನೈತಿಕ ಪತನಕ್ಕೆ ಉದಾಹರಣೆ. ವಾಲ್ಮೀಕಿ ನಿಗಮದ ಹಗರಣದ ಕುರಿತು ಸದನದಲ್ಲೇ ನೂರಾರು ಕೋಟಿ ರೂಪಾಯಿ ಅವ್ಯವಹಾರ ನಡೆದಿದೆ ಎಂದು ಮುಖ್ಯಮಂತ್ರಿ ಒಪ್ಪಿಕೊಂಡಿದ್ದಾರೆ. ಜೊತೆಗೆ ಅಬಕಾರಿ ಇಲಾಖೆಯಲ್ಲಿ ಸುಮಾರು 6 ಸಾವಿರ ಕೋಟಿ ರೂ. ಹಗರಣ ನಡೆದಿದ್ದರೂ ಸಚಿವರು ರಾಜೀನಾಮೆ ನೀಡಿಲ್ಲ. ವೈನ್‌ಶಾಪ್ ಅಸೋಸಿಯೇಷನ್‌ಗಳು ದೂರು ಹಾಗೂ ಸಾಕ್ಷಿ ನೀಡಿದ್ದರೂ ಯಾವುದೇ ಕ್ರಮ ಕೈಗೊಳ್ಳಲಿಲ್ಲ.

ಲೋಕಾಯುಕ್ತ ದಾಳಿಯಲ್ಲಿ ಅಧಿಕಾರಿಗಳು ಲಂಚದ ಹಣ ಸಮೇತ ಬಂಧಿತರಾದರೂ ಸಚಿವರು ಅದೇ ಖಾತೆಯಲ್ಲಿ ಮುಂದುವರಿದಿರುವುದು ದುರಂತವಾಗಿದೆ. ಮೈಸೂರಿನಲ್ಲಿ ವೈನ್ ಶಾಪ್ ನಡೆಸಲು ಪ್ರತಿ ತಿಂಗಳು ಮಂಥ್ಲಿ ಫಿಕ್ಸ್ ಮಾಡಿರುವುದು ಭ್ರಷ್ಟಾಚಾರದ ಪರಾಕಾಷ್ಠೆಯನ್ನು ತೋರಿಸುತ್ತಿದೆ. ಸುಮಾರು 37,000 ಕೋಟಿ ಗುತ್ತಿಗೆದಾರರ ಬಾಕಿ ಹಣ ಪಾವತಿಸಿಲ್ಲ. ಲೋಕಾಯುಕ್ತ ನ್ಯಾಯಮೂರ್ತಿ ಬಿ. ಬೀರಪ್ಪ ಅವರೇ ಸರ್ಕಾರದಲ್ಲಿ ಶೇ. 63ಕ್ಕೂ ಹೆಚ್ಚು ಭ್ರಷ್ಟಾಚಾರ ಇದೆ ಎಂದು ಹೇಳಿಕೆ ನೀಡಿರುವುದೇ ಮತ್ತೊಂದು ಸಾಕ್ಷಿಯಾಗಿದೆ.

ಗೃಹಲಕ್ಷ್ಮೀ ಯೋಜನೆಯಲ್ಲಿ ಸಾವಿರಾರು ಕೋಟಿ ಹಗರಣ ನಡೆದಿದೆ. 2025 ಫೆಬ್ರವರಿ-ಮಾರ್ಚ್ ತಿಂಗಳ ಕಂತುಗಳನ್ನು ಮಹಿಳೆಯರಿಗೆ ನೀಡದೇ ಸುಮಾರು 5000 ಕೋಟಿ ಅವ್ಯವಹಾರ ನಡೆದಿದೆ. ಚುನಾವಣೆ ಬಂದಾಗ ಮಾತ್ರ ಹಣ ಜಮೆ ಮಾಡುತ್ತಾರೆ, ಹೀಗಾಗಿ ಇದು ಗೃಹಲಕ್ಷ್ಮೀ ಅಲ್ಲ, ಎಲೆಕ್ಷನ್ ಲಕ್ಷ್ಮೀಯಾಗಿದೆ ಎಂದರು.

ತುಂಗಭದ್ರ ಡ್ಯಾಂ ದುರಸ್ತಿ ಕಾಮಗಾರಿಗೆ ಹಣ ನೀಡಿಲ್ಲ. ರಾಜ್ಯದಲ್ಲಿ ಡ್ರಗ್ಸ್ ಹಾವಳಿ ಹೆಚ್ಚಾಗಿದೆ. ಜೈಲುಗಳು ಅರಮನೆಗಳಾಗಿ ಮಾರ್ಪಟ್ಟಿವೆ. ಬೆಂಗಳೂರು, ವಿಜಯಪುರ, ಬೀದರ್, ಮಂಗಳೂರು ನಗರಗಳಲ್ಲಿ ಬ್ಯಾಂಕ್ ದರೋಡೆ ಪ್ರಕರಣಗಳು ಹೆಚ್ಚಿವೆ. ಪೊಲೀಸರೇ ಅನೇಕ ದರೋಡೆ ಪ್ರಕರಣಗಳಲ್ಲಿ ಭಾಗಿಯಾಗುತ್ತಿದ್ದಾರೆ. ಮೈಸೂರು ಹಾಗೂ ಬೆಂಗಳೂರಿನಲ್ಲಿ ಬೇರೆ ರಾಜ್ಯದ ಪೊಲೀಸರು ಬಂದು ಡ್ರಗ್ಸ್ ಫ್ಯಾಕ್ಟರಿಗಳ ಮೇಲೆ ದಾಳಿ ಮಾಡಿರುವುದು ನಾಚಿಕೆಗೇಡಿನ ಸಂಗತಿ ಎಂದರು.

ಸಿಲಿಕಾನ್ ಸಿಟಿ ಬೆಂಗಳೂರು ಗುಂಡಿಗಳ ನಗರವಾಗಿದೆ. 350ಕ್ಕೂ ಹೆಚ್ಚು ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿದ್ದಾರೆ. ಜನನ ಪ್ರಮಾಣ ಪತ್ರದಿಂದ ಹಿಡಿದು ಮರಣ ಪ್ರಮಾಣ ಪತ್ರದವರೆಗೆ ಎಲ್ಲ ದರಗಳನ್ನು ಹೆಚ್ಚಿಸಿದ್ದಾರೆ. ಇವುಗಳ ಜೊತೆಗೆ 54 ಮಂದಿಗೆ ಕ್ಯಾಬಿನೆಟ್ ದರ್ಜೆ ನೀಡಿ ನೂರಾರು ಕೋಟಿ ಅನಗತ್ಯ ವೆಚ್ಚ ಮಾಡಿದ್ದಾರೆ. ಹೀಗಾಗಿ ಮೋಜು-ಮಸ್ತಿ, ಭ್ರಷ್ಟಾಚಾರ ಮತ್ತು ಕಾನೂನು ಸುವ್ಯವಸ್ಥೆಯನ್ನು ಸಂಪೂರ್ಣ ನಿರ್ಲಕ್ಷಿಸಿರುವ ಈ ಕಾಂಗ್ರೆಸ್ ಸರ್ಕಾರಕ್ಕೆ 1000 ದಿನಗಳ ಸಂಭ್ರಮಾಚರಣೆ ಮಾಡಲು ಯಾವುದೇ ನೈತಿಕತೆ ಇಲ್ಲ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯ್ದರು.

ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ರಾಜು ಕುರುಡಗಿ, ಶಾಸಕ ಡಾ. ಚಂದ್ರು ಲಮಾಣಿ, ಸಂತೋಷ ಹಡಪದ, ಸಂತೋಷ ಬಿರಾದಾರ್, ಬಿಜೆಪಿ ನಗರ ಘಟಕದ ಅಧ್ಯಕ್ಷ ನಾಗರಾಜ್ ಲಕ್ಕುಂಡಿ, ಜಿಲ್ಲಾ ಪ್ರ.ಕಾ. ಫಕ್ಕೀರೇಶ ರಟ್ಟಿಹಳ್ಳಿ, ತಾಲೂಕಾ ಮಹಿಳಾಧ್ಯಕ್ಷೆ ನಂದಾ ಪಲ್ಲೆದ, ಶಂಕರ ಮರಾಠೆ, ಸಂದೀಪ ಕಪ್ಪತ್ತನವರ, ರಾಮಣ್ಣ ಕಂಬಳಿ, ವಿನಾಯಕ ಭಿಡವೆ, ಸಂತೋಷ ತೋಡೆಕಾರ ಮುಂತಾದವರು ಉಪಸ್ಥಿತರಿದ್ದರು.

ರಾಜ್ಯಾದ್ಯಂತ ಬಿಪಿಎಲ್ ಕಾರ್ಡ್ಗಳನ್ನು ರದ್ದುಪಡಿಸಲಾಗಿದೆ. ಇದು ಅಲ್ಪಸಂಖ್ಯಾತರ ತುಷ್ಟೀಕರಣ ಸರ್ಕಾರವಾಗಿದೆ. ರೈತರ ಜಮೀನು, ಮಠ-ಮಂದಿರಗಳ ಆಸ್ತಿಗಳನ್ನು ವಕ್ಫ್ ಆಸ್ತಿಗಳಾಗಿ ಪರಿವರ್ತಿಸಲು ಬಹುದೊಡ್ಡ ಹುನ್ನಾರ ನಡೆಯುತ್ತಿದೆ. ಇದು ರೈತರ ವಿರೋಧಿ ಸರ್ಕಾರವಾಗಿದೆ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ರದ್ದು, ಬೆಂಬಲ ಬೆಲೆ ನೀಡದಿರುವುದು, ರೈತ ವಿದ್ಯಾನಿಧಿ ಸ್ಥಗಿತ, ರೈತ ವಿರೋಧಿ ನೀತಿಗಳು ಎಂದು ಎನ್. ರವಿಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!