ಹಾವೇರಿ: ಜಿಲ್ಲೆಯ ಹಾನಗಲ್ ತಾಲೂಕಿನ ಹೇರೂರು ಗ್ರಾಮದಲ್ಲಿ ನಡೆದ ಕಳ್ಳತನ ಪ್ರಕರಣವು ಕುಟುಂಬದ ನಂಬಿಕೆಯನ್ನು ಕದಡುವಂತಾಗಿದೆ. ಅಣ್ಣನ ಮನೆಯನ್ನೇ ಕಳ್ಳತನ ಮಾಡಿದ ಆರೋಪದಲ್ಲಿ ತಮ್ಮ ಮಹಮ್ಮದ ಅಲಿ ಹಂಚಿನಮನಿ (36) ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಫೆಬ್ರುವರಿ 14, 2026ರಂದು ಸಂಜೆ 5 ಗಂಟೆಯಿಂದ ರಾತ್ರಿ 11 ಗಂಟೆಯೊಳಗೆ ಈ ಘಟನೆ ನಡೆದಿದೆ. ಮಹಮ್ಮದ ಗೌಸ್ ಹಂಚಿನಮನಿ ಅವರ ಮನೆಗೆ ಕಳ್ಳರು ಅಡುಗೆ ಕೋಣೆಯ ಮೇಲ್ಛಾವಣಿಯ ಹೆಂಚನ್ನು ಕತ್ತರಿಸಿ ಪ್ರವೇಶಿಸಿದ್ದಾರೆ. ಮನೆಯಲ್ಲಿ ಇರಿಸಿದ್ದ 15 ಲಕ್ಷ 42 ಸಾವಿರ ರೂಪಾಯಿ ಮೌಲ್ಯದ ಚಿನ್ನ, ಬೆಳ್ಳಿ ಆಭರಣಗಳು ಹಾಗೂ ನಗದು ಹಣವನ್ನು ಕದ್ದೊಯ್ದಿದ್ದಾರೆ.
ಪ್ರಕರಣ ಗಂಭೀರವಾಗಿದ್ದರಿಂದ ಹಾನಗಲ್ ಪೊಲೀಸರು ತಕ್ಷಣ ಸ್ಥಳ ಪರಿಶೀಲನೆ ನಡೆಸಿದರು. ಬೆರಳಚ್ಚು ತಜ್ಞರು, ಶ್ವಾನದಳ ಹಾಗೂ ಜಿಲ್ಲಾ ತಾಂತ್ರಿಕ ಸಿಬ್ಬಂದಿಯನ್ನು ಕರೆಸಿ ಪರಿಶೀಲನೆ ಕೈಗೊಂಡರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋದಾ ವಂಟಗೋಡಿ, ಹೆಚ್ಚುವರಿ ಎಸ್ಪಿ ಎಲ್.ವೈ. ಶಿರಕೋಳ, ಶಿಗ್ಗಾಂವ್ ಡಿವೈಎಸ್‌ಪಿ ಗುರುಶಾಂತಪ್ಪ ಕೆ.ವಿ ಹಾಗೂ ಹಾನಗಲ್ ಸಿಪಿಐ ಬಸವರಾಜ ಹಳಬಣ್ಣ ಮಾರ್ಗದರ್ಶನದಲ್ಲಿ ಪಿಎಸ್‌ಐ ಸಂಪತ್ ಎಸ್ ಆನಿಕಿವಿ ನೇತೃತ್ವದ ತಂಡ ತನಿಖೆ ತೀವ್ರಗೊಳಿಸಿತು.
ತನಿಖೆಯಲ್ಲಿ ಶಂಕೆ ತಮ್ಮ ಮಹಮ್ಮದ ಅಲಿ ಕಡೆ ತಿರುಗಿತು. ವಿಚಾರಣೆ ನಡೆಸಿದಾಗ ಆರೋಪ ಸಾಬೀತಾಗಿದ್ದು, ಅವರನ್ನು ಬಂಧಿಸಲಾಯಿತು.
ಬಂಧಿತನಿಂದ 38 ಗ್ರಾಂ ಚಿನ್ನದ ಮಾಂಗಲ್ಯ ಸರ – 4.56 ಲಕ್ಷ ರೂ, .23 ಗ್ರಾಂ ಚಿನ್ನದ ನೆಕ್ಲೆಸ್ – 2.76 ಲಕ್ಷ ರೂ., 8 ಗ್ರಾಂ ಬಂಗಾರದ ಚೈನ್ – 96 ಸಾವಿರ ರೂ., 15 ಗ್ರಾಂ ಬಂಗಾರದ ಪದಕ ಸರ – 1.8 ಲಕ್ಷ ರೂ., 22 ಗ್ರಾಂ ತೂಕದ 9 ಉಂಗುರಗಳು – 2.5 ಲಕ್ಷ ರೂ., 135 ಗ್ರಾಂ ಬೆಳ್ಳಿ ಕಾಲು ಚೈನ್ – 35 ಸಾವಿರ ರೂ., 2 ಗ್ರಾಂ ಕಿವಿಯೋಲೆ – 24 ಸಾವಿರ ರೂ., ನಗದು ಹಣ – 31 ಸಾವಿರ ರೂ. ಒಟ್ಟು 15 ಲಕ್ಷ 42 ಸಾವಿರ ರೂಪಾಯಿ ಮೌಲ್ಯದ ಆಭರಣ ಮತ್ತು ನಗದು ವಶಪಡಿಸಿಕೊಳ್ಳಲಾಗಿದೆ.
ಕುಟುಂಬದೊಳಗಿನ ದ್ರೋಹವೇ ಈ ಪ್ರಕರಣದ ಪ್ರಮುಖ ಆಘಾತ. ಹಾನಗಲ್ ಪೊಲೀಸ್ ತಂಡದ ತ್ವರಿತ ಕಾರ್ಯಾಚರಣೆ ಪ್ರಕರಣವನ್ನು ಬೆಳಕಿಗೆ ತಂದಿದೆ.



