ರಾಣೇಬೆನ್ನೂರು: ಹುಬ್ಬಳ್ಳಿಯಲ್ಲಿ ಕಳ್ಳತನ ಮಾಡಿದ್ದ ಬಂಗಾರವನ್ನು ಮಾರಾಟ ಮಾಡಲು ನಗರದ ಗೋಲ್ಡ್ ಲೋನ್ ಕಂಪನಿಗೆ ಬಂದಿದ್ದ ಮಹಿಳೆಯನ್ನು ರಾಣೇಬೆನ್ನೂರು ನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತೆಯನ್ನು ಹುಬ್ಬಳ್ಳಿ ಮೂಲದ ಶ್ರೀದೇವಿ ಸಂಜೀವ ಕಟ್ಟೇಕಾರ ಎಂದು ಗುರುತಿಸಲಾಗಿದೆ.
ಆರೋಪಿಯು ಹುಬ್ಬಳ್ಳಿಯಲ್ಲಿ ಕಳ್ಳತನ ಮಾಡಿದ್ದ ಸುಮಾರು 236 ಗ್ರಾಂ ಚಿನ್ನಾಭರಣಗಳನ್ನು (ಅಂದಾಜು ₹16 ಲಕ್ಷ ಮೌಲ್ಯ) ಮಾರಾಟ ಮಾಡಲು ರಾಣೇಬೆನ್ನೂರಿನ ಖಾಸಗಿ ಗೋಲ್ಡ್ ಕಂಪನಿಗೆ ಬಂದಿದ್ದಳು ಎಂದು ತಿಳಿದುಬಂದಿದೆ.
ಚಿನ್ನ ಮಾರಾಟ ಮಾಡಲು ಬಂದ ಮಹಿಳೆಯ ನಡವಳಿಕೆ ಹಾಗೂ ಆಕೆಯ ಬಳಿಯಿದ್ದ ಚಿನ್ನದ ದಾಖಲೆಗಳ ಬಗ್ಗೆ ಗೋಲ್ಡ್ ಕಂಪನಿಯ ಸಿಬ್ಬಂದಿಗೆ ಅನುಮಾನ ಮೂಡಿದೆ. ತಕ್ಷಣವೇ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ಸ್ಥಳಕ್ಕೆ ಬಂದ ರಾಣೇಬೆನ್ನೂರು ನಗರ ಪೊಲೀಸರು ಮಹಿಳೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಳ್ಳತನದ ಪ್ರಕರಣ ಬೆಳಕಿಗೆ ಬಂದಿದೆ.
ಪ್ರಾಥಮಿಕ ತನಿಖೆಯಲ್ಲಿ ಮಹಿಳೆಯ ಬಳಿ ಒಟ್ಟು 236 ಗ್ರಾಂ ಚಿನ್ನ ಇರುವುದು ಪತ್ತೆಯಾಗಿದೆ. ಅದರಲ್ಲಿ 40 ಗ್ರಾಂ ಚಿನ್ನವನ್ನು (ಸುಮಾರು ₹6 ಲಕ್ಷ ಮೌಲ್ಯ) ಮಾರಾಟ ಮಾಡಲು ಮುಂದಾಗಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಪೊಲೀಸರು ಚಿನ್ನವನ್ನು ವಶಪಡಿಸಿಕೊಂಡಿದ್ದು, ಆರೋಪಿಯ ಹಿಂದೆ ಬೇರೆ ಜಿಲ್ಲೆಯ ಕಳ್ಳರ ಗ್ಯಾಂಗ್ ಸಂಪರ್ಕವಿದೆಯೇ ಎಂಬ ಬಗ್ಗೆ ತನಿಖೆಯನ್ನು ಚುರುಕುಗೊಳಿಸಿದ್ದಾರೆ.



