ಮಂಡ್ಯ:- ಜಿಲ್ಲೆಯ ಮದ್ದೂರು ತಾಲ್ಲೂಕಿನ K. M. ದೊಡ್ಡಿ ಸಮೀಪದ ಹರಳಹಳ್ಳಿ ಗ್ರಾಮದಲ್ಲಿ ನಾಡಬಾಂಬ್ ಸ್ಫೋಟಗೊಂಡು ಹಸುವಿನ ಬಾಯಿ ಛಿದ್ರಗೊಂಡ ದುರ್ಘಟನೆ ಸಂಭವಿಸಿದೆ.
ಗ್ರಾಮದ ರೈತ ಮಹಿಳೆ ರಾಜಮ್ಮಣಿ ಅವರಿಗೆ ಸೇರಿದ ಹಸು ತೆಕ್ಕಲು ಜಮೀನಿನಲ್ಲಿ ಹುಲ್ಲು ಮೇಯುತ್ತಿದ್ದ ವೇಳೆ ಮಧ್ಯಾಹ್ನ ಸುಮಾರು 12.30ರ ಹೊತ್ತಿಗೆ ನಾಡಬಾಂಬ್ ಸ್ಫೋಟಗೊಂಡಿದೆ.
ಸ್ಫೋಟದ ಪರಿಣಾಮ ಹಸುವಿನ ಬಾಯಿ ಸಂಪೂರ್ಣ ಛಿದ್ರಗೊಂಡಿದ್ದು, ಹಸುವಿನ ಸ್ಥಿತಿ ಗಂಭೀರವಾಗಿದೆ. ಕಾಡುಪ್ರಾಣಿಗಳನ್ನು ಬೇಟೆಯಾಡಲು ಅಕ್ರಮವಾಗಿ ಇಡಲಾಗಿದ್ದ ನಾಡಬಾಂಬ್‌ಗೆ ಹಸು ಬಲಿಯಾಗಿರುವುದು ತಿಳಿದುಬಂದಿದೆ. ಹಸುವನ್ನೇ ಆಧಾರವಾಗಿ ಜೀವನ ಸಾಗಿಸುತ್ತಿದ್ದ ಬಡ ರೈತ ಮಹಿಳೆ ಹಸುವಿನ ಸ್ಥಿತಿ ಕಂಡು ಗೋಳಾಡುತ್ತಿರುವ ದೃಶ್ಯ ಮನಕಲುಕುವಂತಿದೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, K. M. ದೊಡ್ಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



