ಲಕ್ನೋ: ಉತ್ತರ ಪ್ರದೇಶದ ಉನ್ನಾವೊ ಜಿಲ್ಲೆಯ ಸಪ್ರು ಕ್ರೀಡಾಂಗಣದಲ್ಲಿ ನಡೆದ ಕ್ರಿಕೆಟ್ ಪಂದ್ಯದ ವೇಳೆ ಜೇನು ದಾಳಿಯಿಂದ ಅನುಭವಿ ಅಂಪೈರ್ ಮಾಣಿಕ್ ಗುಪ್ತಾ ಮೃತಪಟ್ಟಿರುವ ದುರ್ಘಟನೆ ನಡೆದಿದೆ.
ಪಂದ್ಯ ಮುಗಿದ ಬಳಿಕ ಪಾನೀಯ ವಿರಾಮದ ಸಮಯದಲ್ಲಿ ಸಹ ಅಂಪೈರ್ ಅವರನ್ನು ಭೇಟಿ ಮಾಡಲು ತೆರಳಿದ್ದ ಮಾಣಿಕ್ ಗುಪ್ತಾ ಮೇಲೆ ಜೇನುಹುಳುಗಳ ಹಿಂಡು ಏಕಾಏಕಿ ದಾಳಿ ನಡೆಸಿತು. ಅಲ್ಲಿದ್ದವರ ಮೇಲೆ ಹಾರಿಬಂದ ಜೇನುಹುಳುಗಳಿಂದ ತಪ್ಪಿಸಿಕೊಳ್ಳಲು ಯತ್ನಿಸುವಾಗ ಮಾಣಿಕ್ ಆಯತಪ್ಪಿ ಬಿದ್ದಿದ್ದು, ಜೇನುಹುಳುಗಳು ಅವರನ್ನು ಮುತ್ತಿಕೊಂಡು ಕಚ್ಚಿವೆ ಎಂದು ತಿಳಿದುಬಂದಿದೆ.
ಮಾಣಿಕ್ ಗುಪ್ತಾ ಸುಮಾರು 30 ವರ್ಷಗಳಿಂದ ಅಂಪೈರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಅವರು ರಾಜ್ಯ ಸಮಿತಿಯ ಅಂಪೈರ್ ಆಗಿದ್ದಲ್ಲದೆ ಕಾನ್ಪುರ ಕ್ರಿಕೆಟ್ ಅಸೋಸಿಯೇಷನ್ ಜೊತೆಗೂ ಸಂಬಂಧ ಹೊಂದಿದ್ದರು. ಕಾನ್ಪುರ ಕ್ರಿಕೆಟ್ ವಲಯದಲ್ಲಿ ವಿಶಿಷ್ಟ ಹಾಗೂ ಗೌರವಾನ್ವಿತ ಅಂಪೈರ್ ಎಂದು ಹೆಸರು ಗಳಿಸಿದ್ದರು.
ಮಾಣಿಕ್ ಅವರ ನೆರೆಯ ಭರತೇಂದು ಪುರಿ ಮಾತನಾಡಿ, ಮಾಣಿಕ್ ಗುಪ್ತಾ ತಮ್ಮ ಇಡೀ ಜೀವನವನ್ನು ಅಂಪೈರಿಂಗ್ ಹಾಗೂ ಕುಟುಂಬಕ್ಕಾಗಿ ಮುಡಿಪಾಗಿಟ್ಟಿದ್ದರು. ಅವರು ಕ್ರಿಕೆಟ್‌ಗೆ ಸಂಪೂರ್ಣವಾಗಿ ಸಮರ್ಪಿತರಾಗಿದ್ದರು. ಈ ಘಟನೆ ಅತ್ಯಂತ ದುರದೃಷ್ಟಕರ ಎಂದು ಸಂತಾಪ ವ್ಯಕ್ತಪಡಿಸಿದರು.



