ಬೆಂಗಳೂರು: ಎಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ನಡೆಸಲಿದ್ದು, ಇದಕ್ಕೆ ಅರ್ಜಿ ಸಲ್ಲಿಸುವ ಕೊನೆ ದಿನಾಂಕವನ್ನು ಮತ್ತೊಮ್ಮೆ ಫೆಬ್ರುವರಿ 27ರವರೆಗೆ ವಿಸ್ತರಿಸಲಾಗಿದೆ.
ಇದು ಕೊನೆಯ ಅವಕಾಶವಾಗಿದ್ದು, ಈ ಅವಧಿ ನಂತರ ಪುನಃ ದಿನಾಂಕ ವಿಸ್ತರಣೆ ಇರುವುದಿಲ್ಲ. ಹೀಗಾಗಿ ಅಭ್ಯರ್ಥಿಗಳು ನಿಗದಿತ ಅವಧಿಯೊಳಗೆ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬೇಕು ಎಂದು ಪ್ರಾಧಿಕಾರದ ಆಡಳಿತಾಧಿಕಾರಿ ಇಸ್ಲಾವುದ್ದೀನ್ ಗದ್ಯಾಳ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇದುವರೆಗೂ 3.18 ಲಕ್ಷ ಮಂದಿ ಶುಲ್ಕ ಪಾವತಿಸಿ ಅರ್ಜಿ ಸಲ್ಲಿಸಿದ್ದು, ಇನ್ನೂ ಅನೇಕರು ಫೆ.22ರ ಕೊನೆ ದಿನಾಂಕವನ್ನು ವಿಸ್ತರಿಸುವಂತೆ ಕೋರಿದ್ದಾರೆ, ಆ ಪ್ರಕಾರ ಅರ್ಜಿ ಸಲ್ಲಿಸಲು ಫೆ.27 ಹಾಗೂ ಶುಲ್ಕ ಪಾವತಿಗೆ ಮಾರ್ಚ್ 3ರವರೆಗೆ ಅವಕಾಶ ನೀಡಲಾಗಿದೆ.
ಅರ್ಜಿ ಸಲ್ಲಿಸಿರುವವರ ಪೈಕಿ 2.18 ಲಕ್ಷ ಅಭ್ಯರ್ಥಿಗಳ ದಾಖಲೆಗಳ ಪರಿಶೀಲನೆ ಸ್ಯಾಟ್ಸ್ ಮೂಲಕ ಆನ್‌ಲೈನ್ ನಲ್ಲಿ ಆಗಿದೆ. ಕಾಲೇಜು ಹಂತದಲ್ಲಿ 1.08 ಲಕ್ಷ ಅಭ್ಯರ್ಥಿಗಳ ದಾಖಲೆ ಪರಿಶೀಲನೆ ಮಾಡಲಾಗಿದೆ ಎಂದು ಅವರು ವಿವರಿಸಿದ್ದಾರೆ.



