ಹಾಸನ: ಹಂಪ್ಸ್ ಗಮನಿಸದೇ ಬುಲೆಟ್ ಬೈಕ್ ಚಲಾಯಿಸುವ ವೇಳೆ ಸಂಭವಿಸಿದ ಅಪಘಾತದಲ್ಲಿ ಓರ್ವ ಯುವತಿ ಮೃತಪಟ್ಟಿದ್ದು, ಮತ್ತೋರ್ವ ಯುವತಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಹಾಸನ ನಗರದ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ.
ಸತ್ಯಮಂಗಲ ಬಡಾವಣೆಯ ಪ್ರಿಯಾ (23) ಮೃತ ಯುವತಿ ಎಂದು ಗುರುತಿಸಲಾಗಿದೆ. ಮತ್ತೋರ್ವ ಯುವತಿ ಸ್ವಾತಿ (24) ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಿಯಾ ಖಾಸಗಿ ಕಾಲೇಜಿನಲ್ಲಿ ಎಂಸಿಎ ಅಂತಿಮ ವರ್ಷದ ವಿದ್ಯಾರ್ಥಿನಿಯಾಗಿದ್ದಳು.
ಸ್ವಾತಿಗೆ ಕಳೆದ ನವೆಂಬರ್ ತಿಂಗಳಲ್ಲಿ ಮದುವೆಯಾಗಿತ್ತು ಎಂದು ತಿಳಿದುಬಂದಿದೆ. ಇಬ್ಬರೂ ಹೆಲ್ಮೆಟ್ ಧರಿಸದೇ ಬುಲೆಟ್ ಬೈಕ್‌ನಲ್ಲಿ ಜಾಲಿ ರೈಡ್‌ಗೆ ತೆರಳಿದ್ದರು. ಪ್ರಿಯಾ ಬೈಕ್ ಚಲಾಯಿಸುತ್ತಿದ್ದು, ಸ್ವಾತಿ ಹಿಂಬದಿ ಸೀಟಿನಲ್ಲಿ ಕುಳಿತಿದ್ದಳು. ಈ ವೇಳೆ ರಸ್ತೆಯ ಹಂಪ್ಸ್ ಗಮನಿಸದೇ ಇಬ್ಬರೂ ಬೈಕ್‌ನಿಂದ ಕೆಳಗೆ ಬಿದ್ದಿದ್ದಾರೆ.
ಅಪಘಾತದ ಪರಿಣಾಮ ಪ್ರಿಯಾ ಸ್ಥಳದಲ್ಲೇ ಮೃತಪಟ್ಟಿದ್ದು, ಸ್ವಾತಿಗೆ ಗಂಭೀರ ಗಾಯಗಳಾಗಿವೆ. ಹೆಚ್ಚಿನ ಚಿಕಿತ್ಸೆಗಾಗಿ ಸ್ವಾತಿಯನ್ನು ಬೆಂಗಳೂರಿನ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಪ್ರಕರಣ ಹಾಸನ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದೆ.



