ಬೆಂಗಳೂರು: ರಾಜಧಾನಿ ಬೆಂಗಳೂರುದಲ್ಲಿ ಐಟಿ ದಾಳಿಗಳ ಬೆನ್ನಲ್ಲೇ ಮತ್ತೊಂದು ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ. ಬಿಬಿಎಂಪಿಯ ನಿವೃತ್ತ ಮುಖ್ಯ ಇಂಜಿನಿಯರ್ ಪರಮೇಶ್ವರಯ್ಯ ಅವರು ಕೋರಮಂಗಲದ ತಮ್ಮ ನಿವಾಸದಲ್ಲಿ ಇಂದು ಬೆಳ್ಳಂಬೆಳಗ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಅಕ್ರಮ ಆಸ್ತಿ ಸಂಬಂಧ ಸಿಸಿಬಿಯಲ್ಲಿ ದಾಖಲಾಗಿದ್ದ ಎಫ್ಐಆರ್ ಹಿನ್ನೆಲೆ ತನಿಖೆಗೆ ಹೆದರಿ ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ. ಪರಮೇಶ್ವರಯ್ಯ ಅವರು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮಹಾದೇವಪುರ ವಲಯದಲ್ಲಿ ಮುಖ್ಯ ಇಂಜಿನಿಯರ್ ಆಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.
ಸುಮಾರು 20 ದಿನಗಳ ಹಿಂದೆ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿ ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಂಡಿದ್ದರು. ಇದಾದ ಬಳಿಕ ಅವರು ಖಿನ್ನತೆಯಲ್ಲಿ ಇದ್ದರು ಎನ್ನಲಾಗಿದೆ.
2021ರಲ್ಲಿ ಗುತ್ತಿಗೆದಾರ ಅನಿಲ್ ನಿವಾಸದ ಮೇಲೆ ನಡೆದ ಐಟಿ ದಾಳಿಯಲ್ಲಿ 1.35 ಲಕ್ಷ ರೂ. ನಗದು, 275.98 ಗ್ರಾಂ ಚಿನ್ನಾಭರಣ ಹಾಗೂ ಜಮೀನು ದಾಖಲೆಗಳು ಪತ್ತೆಯಾಗಿದ್ದವು. ವಿಚಾರಣೆಯಲ್ಲಿ ಅನಿಲ್ ಕುಮಾರ್, ಈ ಹಣ ಹಾಗೂ ದಾಖಲೆಗಳು ಪರಮೇಶ್ವರಯ್ಯ ಅವರಿಗೆ ಸೇರಿವೆ ಎಂದು ಹೇಳಿದ್ದನು.
ಅನಂತರ 2021ರ ಡಿಸೆಂಬರ್ 4ರಂದು ಪರಮೇಶ್ವರಯ್ಯ ಮನೆ ಮೇಲೆ ಐಟಿ ದಾಳಿ ನಡೆದಿದ್ದು, ಡಿಸೆಂಬರ್ 6ರಂದು ಬ್ಯಾಂಕ್ ಲಾಕರ್‌ಗಳ ಪರಿಶೀಲನೆಯಲ್ಲಿ 86.35 ಲಕ್ಷ ರೂ. ನಗದು ಪತ್ತೆಯಾಗಿತ್ತು. ಲಾಕರ್ ಜಿ. ಕಿಶೋರ್ ನಾಯ್ಡು ಹೆಸರಲ್ಲಿ ಇದ್ದರೂ, ಅದರ ಕೀ ಪರಮೇಶ್ವರಯ್ಯ ಪತ್ನಿ ಮಹಾಲಕ್ಷ್ಮೀ ಅವರ ಹೆಸರಿನಲ್ಲಿ ಇತ್ತು ಎಂದು ತಿಳಿದುಬಂದಿತ್ತು.
2012ರಲ್ಲಿ 29.64 ಲಕ್ಷ ರೂ. ಇದ್ದ ಆಸ್ತಿ ಮೌಲ್ಯ 2021ರ ವೇಳೆಗೆ 5.85 ಕೋಟಿಗೆ ಏರಿಕೆಯಾಗಿದೆ ಎಂದು ತನಿಖೆಯಲ್ಲಿ ಬಹಿರಂಗವಾಗಿತ್ತು. ಈ ಹಿನ್ನೆಲೆಯಲ್ಲಿ 2026ರ ಜನವರಿ 30ರಂದು ಸಿಸಿಬಿಯಲ್ಲಿ ಎಫ್ಐಆರ್ ದಾಖಲಾಗಿತ್ತು.
ಇತ್ತೀಚೆಗಷ್ಟೇ ಉದ್ಯಮಿ ಸಿಜೆ ರಾಯ್ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದ ಬಳಿಕ ಇದೀಗ ಪರಮೇಶ್ವರಯ್ಯ ಅವರ ಸಾವು ಮತ್ತೊಂದು ಸಂಚಲನ ಸೃಷ್ಟಿಸಿದೆ.



