ಬೆಂಗಳೂರು: ಮಕ್ಕಳ ಆರೈಕೆ ರಜೆ ಮಗುವಿನ ಹಕ್ಕಾಗಿದ್ದು, ಈ ರಜೆಯನ್ನು ನಿರಾಕರಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ಸಿಸಿಎಲ್ ಕೋರಿ ಬಂದ ಅರ್ಜಿಗಳನ್ನು ಆದ್ಯತೆ ಮೇರೆಗೆ ಮಂಜೂರು ಮಾಡಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದೆ.
ಕೇಂದ್ರ ಸರ್ಕಾರದ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಧೀನದಲ್ಲಿರುವ ಸೆಂಟರ್ ಫಾರ್ ಡೆವಲಪ್‌ಮೆಂಟ್ ಆಫ್ ಅಡ್ವಾನ್ಸ್‌ಡ್ ಕಂಪ್ಯೂಟಿಂಗ್‌ನಲ್ಲಿ (ಸಿ-ಡ್ಯಾಕ್) ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಕವಿತಾ ವಡ್ಡೆ ಅವರಿಗೆ ಫೆಬ್ರವರಿ 6ರಿಂದ ಮೇ 20ರವರೆಗೆ ಚೈಲ್ಡ್ ಕೇರ್ ಲೀವ್ ಮಂಜೂರು ಮಾಡುವಂತೆ ಹೈಕೋರ್ಟ್ ಆದೇಶಿಸಿದೆ.
ಫೆಬ್ರವರಿ 5ರಂದು ಕೇಂದ್ರ ಆಡಳಿತ ನ್ಯಾಯಮಂಡಳಿ (CAT) ರಜೆ ಮಂಜೂರು ಮಾಡಲು ಆದೇಶ ನೀಡಿತ್ತು. ಇದನ್ನು ಪ್ರಶ್ನಿಸಿ ಕೇಂದ್ರ ಸರ್ಕಾರ ಮೇಲ್ಮನವಿ ಸಲ್ಲಿಸಿತ್ತು. ನ್ಯಾಯಮೂರ್ತಿಗಳಾದ ಎಸ್.ಜಿ. ಪಂಡಿತ್ ಮತ್ತು ಕೆ.ವಿ. ಅರವಿಂದ್ ಅವರಿದ್ದ ಹೈಕೋರ್ಟ್ ವಿಭಾಗೀಯ ಪೀಠ, ಸಿಎಟಿ ಆದೇಶವನ್ನು ಎತ್ತಿಹಿಡಿದು ಮೇಲ್ಮನವಿಯನ್ನು ವಜಾಗೊಳಿಸಿದೆ.
ನ್ಯಾಯಪೀಠ ತಿಳಿಸಿದಂತೆ, ಇತರೆ ರಜೆಗಳನ್ನು ಮಂಜೂರು ಮಾಡುವುದು ಅಥವಾ ನಿರಾಕರಿಸುವುದು ಉದ್ಯೋಗದಾತರ ವಿವೇಚನೆಗೆ ಒಳಪಟ್ಟಿರಬಹುದು. ಆದರೆ ಸಿಸಿಎಲ್ ವಿಚಾರದಲ್ಲಿ ಅಂತಹ ವಿವೇಚನಾ ಅಧಿಕಾರ ಅನ್ವಯಿಸುವುದಿಲ್ಲ. ಮಕ್ಕಳ ಆರೈಕೆಗೆ ಮೀಸಲಾದ ಈ ರಜೆ ನೀಡಲೇಬೇಕು ಎಂದು ಸ್ಪಷ್ಟಪಡಿಸಿದೆ. ತಾಯಿಗೆ ರಜೆ ನಿರಾಕರಿಸಿದರೆ ಅದು ಮಕ್ಕಳ ಮೇಲೆ ಒತ್ತಡ ಉಂಟುಮಾಡಬಹುದು. ಆದ್ದರಿಂದ ಸಿಸಿಎಲ್ ಮಗುವಿನ ಹಕ್ಕು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಅರ್ಜಿದಾರರ ಪರ ವಕೀಲರು, 5 ತಿಂಗಳ ಸಿಸಿಎಲ್ ಕೋರಿದ್ದರೂ ಕೇವಲ 18 ದಿನಗಳ ರಜೆ ಮಾತ್ರ ಮಂಜೂರು ಮಾಡಲಾಗಿದೆ. ಇದು ಕೇಂದ್ರ ನಾಗರಿಕ ಸೇವಾ ರಜೆ ನಿಯಮ 43ಸಿ ಉಲ್ಲಂಘನೆಯಾಗಿದೆ ಎಂದು ವಾದಿಸಿದರು.
ಮಕ್ಕಳ ಶಿಕ್ಷಣ ಮತ್ತು ಅಭಿವೃದ್ಧಿಗಾಗಿ ತಾಯಿಯ ಆರೈಕೆ ಅಗತ್ಯವಿದೆ. ಪರೀಕ್ಷಾ ಅವಧಿಯಲ್ಲಿರುವ ಮಕ್ಕಳಿಗೆ ತಾಯಿಯ ಬೆಂಬಲ ಮುಖ್ಯವಾಗಿದ್ದು, ರಜೆ ನಿರಾಕರಣೆ ಒತ್ತಡಕ್ಕೆ ಕಾರಣವಾಗುತ್ತದೆ ಎಂದು ನ್ಯಾಯಪೀಠಕ್ಕೆ ತಿಳಿಸಲಾಯಿತು. ವಾದ ಆಲಿಸಿದ ಹೈಕೋರ್ಟ್, ಫೆಬ್ರವರಿ 6ರಿಂದ ಮೇ 20ರವರೆಗೆ ಸಿಸಿಎಲ್ ರಜೆ ನೀಡುವಂತೆ ಅಂತಿಮ ಆದೇಶ ನೀಡಿದೆ.



