ಬೆಂಗಳೂರು: ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಮುನ್ನ ಡಿ.ಕೆ. ಶಿವಕುಮಾರ್ ನಾಗರಬಾವಿಯ ಅಜ್ಜಯ್ಯನ ಶಾಖಾ ಮಠಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಅಜ್ಜಯ್ಯ ಡಿಕೆಶಿಗೆ ಮಹತ್ವದ ಸಲಹೆ ಹಾಗೂ ಎಚ್ಚರಿಕೆ ನೀಡಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ರಾಜ್ಯಪಾಲರ ಭೇಟಿಯ ಬಳಿಕ ಪತ್ನಿ ಉಷಾ ಶಿವಕುಮಾರ್ ಹಾಗೂ ಸಂಸದ ಡಿ.ಕೆ. ಸುರೇಶ್ ಅವರೊಂದಿಗೆ ಮಠಕ್ಕೆ ಆಗಮಿಸಿದ ಡಿಕೆಶಿ, ಗದ್ದುಗೆಗೆ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು.
ಮಠದಲ್ಲಿ ಆಶೀರ್ವಚನ ನೀಡಿದ ಅಜ್ಜಯ್ಯ, “ಅತಿಯಾದ ಸಂಭ್ರಮಾಚರಣೆ ಬೇಡ. ಪ್ರತಿಯೊಂದು ನಿರ್ಧಾರವನ್ನು ಯೋಚಿಸಿ ತೆಗೆದುಕೊಳ್ಳಿ. ಮಳೆಗೆ ಪರಿಹಾರವಿದೆ, ಆದರೆ ಸಮಯ ಮತ್ತು ಸಂದರ್ಭದ ತೀರ್ಮಾನ ನಿಮ್ಮ ಕೈಯಲ್ಲಿದೆ” ಎಂದು ಸಲಹೆ ನೀಡಿದ್ದಾರೆ ಎನ್ನಲಾಗಿದೆ.
ಜೂನ್ 3ರಂದು ಎರಡು ಶುಭ ಮುಹೂರ್ತಗಳಿದ್ದು, ಪ್ರಮಾಣವಚನ ಕಾರ್ಯಕ್ರಮದ ಸಮಯ ಹಾಗೂ ಸ್ಥಳದ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುವಂತೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.



